ಸಮಾಜದಲ್ಲಿ ಪರಸ್ಪರ ಪ್ರೀತಿ, ವಾತ್ಸಲ್ಯದಿಂದ ಬದುಕಿದರೆ ಯಾವುದೇ ರೀತಿಯ ಸಂಘರ್ಷ, ಅಶಾಂತಿಗೆ ಅವಕಾಶ ಇರುವುದಿಲ್ಲ ಎಂದು ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕಿ,ನ್ಯಾಯವಾದಿ ಶೈಲಜಾ ರಾಜೇಶ್ ಹೇಳಿದ್ದಾರೆ.
ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಮತ್ತು ಕಾಲೇಜಿನ ಎನ್ ಎಸ್ ಎಸ್ ಘಟಕದ ವತಿಯಿಂದ ಬಿ ಮೂಡ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ಕಾನೂನು ಮಾಹಿತಿ ಶಿಬಿರ ಮತ್ತು ಸನ್ಮಾನ ಸಮಾರಂಭದಲ್ಲಿ ಮಕ್ಕಳ ಹಕ್ಕು ಮತ್ತು ಸಂರಕ್ಷಣೆ, ಫೋಕ್ಸೋ, ಮಹಿಳಾ ಕಾನೂನುಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಯೂಸೂಫ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ದೆಸೆಯಲ್ಲಿಯೇ ಕಾನೂನಿನ ಅರಿವು ಮೂಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ನೆಲೆಯಾಗಲು ಸಾಧ್ಯ ಎಂದು ಅವರು ಹೇಳಿದರು. ಸಂಸ್ಥೆಯ ಟ್ರಸ್ಟಿ ಅನ್ನಪೂರ್ಣ ಬಾಬುರಾಜ್ ಉದ್ಘಾಟಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಗೋಪಾಲ ಅಂಚನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮನುಷ್ಯ ಸಹಜ ಗುಣಗಳಾದ ಪ್ರೀತಿ, ಸಹೋದರತೆ, ಸಮಾನತೆ, ಮಾನವೀಯತೆ ಮೊದಲಾದ ಸದ್ಗುಣಗಳು ಬಲಗೊಂಡಾಗ ಸ್ವಸ್ಥ ಸಮಾಜ ನಿರ್ಮಾಣಗೊಳ್ಳುತ್ತದೆ, ಸಂವಿಧಾನದ ಆಶಯಗಳಿಗೆ ಪೂರಕವಾಗಿ ಜನರು ಬದುಕಿದಾಗ ಸಾಮರಸ್ಯ ನೆಲೆಯಾಗುತ್ತದೆ ಎಂದರು.
ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ಉಪನ್ಯಾಸಕ ವೆಂಕಟೇಶ್ವರ ಭಟ್ ಉಪಸ್ಥಿತರಿದ್ದರು.ಜಾನಪದ ಕಲಾವಿದೆ ಶಾರದಾ ಜಿ. ಬಂಗೇರ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಶಾಹಿದ ಬೇಗಂ ಸ್ವಾಗತಿಸಿದರು. ಎನ್ ಎಸ್ ಎಸ್ ಅಧಿಕಾರಿ ಬಾಲಕೃಷ್ಣ ನಾಯ್ಕ್ ಕೆ. ವಂದಿಸಿದರು. ನ್ಯಾಯವಾದಿ ವಿದ್ಯಾಲತಾ ನಿರೂಪಿಸಿದರು.