ಕಸ ವಿಂಗಡಣೆ ಮಾಡದಿದ್ದರೆ ಜೇಬಿಗೆ ಕತ್ತರಿ
ಪುರಸಭೆಯ ತ್ಯಾಜ್ಯ ವಿಲೇವಾರಿ ವಾಹನದ ಸಿಬ್ಬಂದಿ ಕೈಗೆ ಪ್ರತಿ ದಿನ ಬೆಳಗ್ಗೆ ವಿಂಗಡಿಸದ ಕಸವನ್ನು ಯಥಾವತ್ತಾಗಿ ನೀಡಲು ಹೋಗುವ ಪರಿಪಾಠ ಮುಂದುವರಿಸಿದರೆ ನಿಮ್ಮ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ.
ತ್ಯಾಜ್ಯದಲ್ಲಿ ಹಸಿ ತ್ಯಾಜ್ಯ ಹಾಗೂ ಒಣ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಲೇಬೇಕೆಂದು ಈಗಾಗಲೇ ಸಾಕಷ್ಟು ಪ್ರಚಾರವನ್ನೂ ನೀಡಿದೆ. ಕಸವನ್ನು ವಿಂಗಡಿಸದೇ ಇದ್ದರೆ ದಂಡ ವಿಧಿಸುವುದಾಗಿಯೂ ಈಗಾಗಲೇ ಸಾಕಷ್ಟು ಬಾರಿ ಹೇಳಿದೆ. ಬಂಟ್ವಾಳ ಪುರಸಭೆ ನೀಡುತ್ತಿದ್ದ ಈ ಎಚ್ಚರಿಕೆ ಇನ್ನು ಕೇವಲ ಎಚ್ಚರಿಕೆಯಾಗಿ ಮಾತ್ರವೇ ಉಳಿಯುವುದಿಲ್ಲ.
ಪುರಸಭೆಯ ಕಸ ವಿಲೇವಾರಿ ವಾಹನಗಳಿಗೆ ಕಸವನ್ನು ನೀಡುವ ವಿಧಾನವನ್ನು ಬಂಟ್ವಾಳ ಪುರಸಭೆ ಶನಿವಾರ ಜೂನ್ 30ರಂದು ಪ್ರಕಟಿಸಿದ್ದು, ತ್ಯಾಜ್ಯವನ್ನು ಬೇರ್ಪಡಿಸಿ ನೀಡುವುದು ಕಡ್ಡಾಯವಾಗಿದೆ ತಪ್ಪಿದಲ್ಲಿ 2 ಸಾವಿರ ರೂಗಳಿಂದ 5 ಸಾವಿರ ರೂವರೆಗೆ ದಂಡ ವಿಧಿಸಲಾಗುವುದು ಎಂದು ಹೇಳಿದೆ.
ಜುಲೈ 1ರಿಂದ ಈ ನಿಯಮ ಜಾರಿಗೆ ಬರಲಿದ್ದು, ಇದರಂತೆ ಜುಲೈ 1ರಿಂದ ಬಂಟ್ವಾಳ ಪುರಸಭೆಯ ಪ್ರತಿ ಮಳಿಗೆ, ಮನೆ, ಹೋಟೆಲ್ಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮಿಶ್ರಣ ಮಾಡಿ ನೀಡುವಂತಿಲ್ಲ, ಅದನ್ನು ಬೇರ್ಪಡಿಸಿ ನೀಡಲೇಬೇಕು. ಒಂದು ವೇಳೆ ಮಿಶ್ರ ಮಾಡಿ ನೀಡಿದರೆ ಇದನ್ನು ಕಸ ತೆಗೆದುಕೊಂಡು ಹೋಗುವ ವಾಹನದವರು ನಿರಾಕರಿಸಬಹುದು ಎಂದು ತಿಳಿಸಿದೆ.
ಹೇಗಿದೆ ನಿಯಮ:
ಪುರಸಭೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದಂತೆ ನಿಯಮ ಹೀಗಿದೆ. ವಾರದ ಸೋಮವಾರದಿಂದ ಗುರುವಾರ ತನಕ ಹಸಿಕಸ ಮಾತ್ರ ಮತ್ತು ಬಳಕೆ ಮಾಡಿದ ಪ್ಲಾಸ್ಟಿಕ್ ಹಾಗೂ ಇನ್ನಿತರ ಉಪಯೋಗಕ್ಕೆ ಬಾರದ ಸಾಮಾಗ್ರಿಗಳನ್ನು ಸ್ವಚ್ಛಗೊಳಿಸಿ ಪ್ರತಿ ಶುಕ್ರವಾರದ ಒಂದು ದಿನ ಒಣಕಸ ಮಾತ್ರ ವಿಂಗಡಿಸಿ ಬಂಟ್ವಾಳ ಪುರಸಭೆಯ ಕಸದ ವಾಹನಕ್ಕೆ ನೀಡತಕ್ಕದ್ದು ಎಂದು ಪುರಸಭೆ ಹೇಳಿದೆ.
ಬಂಟ್ವಾಳ ಪುರಸಭೆಯನ್ನು ಸ್ವಚ್ಛ ಸುಂದರ ಪುರಸಭೆಯನ್ನಾಗಿ ಮಾಡಲು ಸಾರ್ವಜನಿಕರ ಸಹಾಯ ಯಾಚಿಸಿರುವ ಪುರಸಭೆ, ತ್ಯಾಜ್ಯವನ್ನು ಬೇರ್ಪಡಿಸಿ ನೀಡುವುದು ನಾಗರಿಕರ ಜವಾಬ್ದಾರಿಯಾಗಿದೆ. ಇದಕ್ಕೆ ತಪ್ಪಿದಲ್ಲಿ ತಮ್ಮಲ್ಲಿ ಉತ್ಪಾದಿಸಿದ ತ್ಯಾಜ್ಯವನ್ನು ಪಡೆಯಲು ನಿರಾಕರಿಸಲಾಗುವುದು ಹಾಗೂ 2 ಸಾವಿರ ರೂಗಳಿಂದ 5 ಸಾವಿರ ರೂಗಳವರೆಗೆ ದಂಡ ವಿಧಿಸಲಾಗುವುದೆಂದು ಬಂಟ್ವಾಳ ಪುರಸಭೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಬಗ್ಗೆ ಸಾರ್ವಜನಿಕರು ಬಂಟ್ವಾಳ ಪುರಸಭೆಯೊಂದಿಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.