ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಎದುರು ಹಳೇ ರಂಗಮಂದಿರ ಕಟ್ಟಡದಲ್ಲಿದ್ದ ಅಟಲ್ ಜನಸ್ನೇಹಿ ಕೇಂದ್ರ ಕೊನೆಗೂ ಮಿನಿ ವಿಧಾನಸೌಧದ ಒಳಗೆ ಶಿಫ್ಟ್ ಆಗಿದೆ.
ಇಲ್ಲಿ ಪಹಣಿ ಭೂಮಿ ಅರ್ಜಿ, ಜಾತಿ ಆದಾಯ ಪಿಂಚಣಿ, ಆಧಾರ್ ಕಾರ್ಡ್ ಗಾಗಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ನಾದುರಸ್ತಿಯಲ್ಲಿರುವ ಈ ಕಟ್ಟಡದಲ್ಲಿ ಕಾರ್ಯಾಚರಿಸಲು ಸಮಸ್ಯೆ ಎದುರಾಗಿತ್ತು. ಆಧಾರ್ ಕಾರ್ಡ್ ಗಾಗಿ ಇದೇ ಕೇಂದ್ರದ ಎದುರು ಸರತಿ ಸಾಲಿನಲ್ಲಿ ಜನರು ನಿಲ್ಲುತ್ತಿದ್ದರು. ಕಳೆದ ವರ್ಷ ಅಕ್ಟೋಬರ್ 22ರಂದು ಮಿನಿ ವಿಧಾನಸೌಧ ಉದ್ಘಾಟನೆಗೊಂಡಿದ್ದರೂ ಅದರ ಎದುರು ಇದ್ದ ಈ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಕಾರ್ಯಾಚರಿಸುತ್ತಿದ್ದ ಜನಸೌಲಭ್ಯದ ವ್ಯವಸ್ಥೆಗಳು ಸ್ಥಳಾಂತರಗೊಂಡಿರಲಿಲ್ಲ. ಇದಾದ ಮೇಲೆ ಚುನಾವಣೆಗಳು ಬಂದು ಹೋದವು. ಕೊನೆಗೂ ಮಿನಿ ವಿಧಾನಸೌಧಕ್ಕೆ ಇಲ್ಲಿನ ಕೆಲಸ ಕಾರ್ಯಗಳು ಸ್ಥಳಾಂತರಗೊಂಡಂತಾಗಿದೆ.
ಸುಮಾರು ಎಂಟು ತಿಂಗಳ ಬಳಿಕ ಮಿನಿ ವಿಧಾನಸೌಧದೊಳಗೆ ಪ್ರವೇಶ ದೊರಕಿರುವ ಈ ಸೌಕರ್ಯಗಳನ್ನು ನಿಜವಾದ ಅರ್ಥದಲ್ಲಿ ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಶ್ರಮಿಸಬೇಕಿದೆ.