ಬಂಟ್ವಾಳ ಪುರಸಭೆಯ ಒಳಚರಂಡಿ ಯೋಜನೆ ಮತ್ತು ಬೆಂಜನಪದವಿನಲ್ಲಿರುವ ಕ್ರೀಡಾಂಗಣಕ್ಕೆ ತನ್ನ ಅವಧಿಯಲ್ಲೇ ಆಡಳಿತಾತ್ಮಕ ಮಂಜೂರಾತಿ ದೊರೆತಿದೆ. ತಾನು ಎಂದಿಗೂ ಉದಾಸೀನ ಮಾಡಿಲ್ಲ. ಬಂಟ್ವಾಳ ವಿಧಾನಸಭೆ ಕ್ಷೇತ್ರದ ಎಲ್ಲ ಜನರ ಬೇಡಿಕೆಯಂತೆ ಕೆಲಸ ಮಾಡಿದ್ದರೂ ಅಪಪ್ರಚಾರ ನಿಂತಿಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವಿದ್ದಾಗ, ತಾನು ಮಂತ್ರಿಯಾಗಿದ್ದ ಸಂದರ್ಭ, ಈ ಕ್ಷೇತ್ರದ ಶಾಸಕನ ನೆಲೆಯಲ್ಲಿ ಬಂಟ್ವಾಳ ಪುರಸಭೆಗೆ 56 ಕೋಟಿ ರೂ ವೆಚ್ಚದಲ್ಲಿ ಎರಡನೇ ಹಂತದ ಒಳಚರಂಡಿ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ದೊರಕಿದೆ, ಇದು ತನ್ನ ಅವಧಿಯಲ್ಲೇ ನಡೆದಿರುವ ಪ್ರಕ್ರಿಯೆ. ಇನ್ನೇನಿದ್ದರು ಟೆಂಡರ್ ಮತ್ತಿತರ ಕೆಲಸಗಳಷ್ಟೇ ನಡೆಯಲಿವೆ ಎಂದು ಹೇಳಿದ ರೈ, ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸುವ ಸಲುವಾಗಿಯೇ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಕ್ಕೆ ತನ್ನ ಅವಧಿಯಲ್ಲೇ ತರಲಾಗಿತ್ತು ಎಂದರು.
ಖಾಸಗಿಯವರಿಂದ ಜಾಗ ಪಡೆದುಕೊಂಡು, ಕೆಲ ಸರಕಾರಿ ಭೂಮಿಯನ್ನು ಖಾಸಗಿಯವರಿಗೆ ನೀಡಿ 5 ಕೋಟಿ ರೂ ಮಂಜೂರಾಗಿದ್ದ ತಾಲೂಕು ಮಟ್ಟದ ಕ್ರೀಡಾಂಗಣಕ್ಕೆ ತನ್ನ ಪ್ರಯತ್ನದ ಫಲವಾಗಿ 10 ಕೋಟಿ ರೂ ಆಡಳಿತಾತ್ಮಕ ಮಂಜೂರಾತಿ ದೊರಕಿದೆ. ತಾಲೂಕು ಕ್ರೀಡಾಂಗಣಕ್ಕೆ ಅಷ್ಟೊಂದು ಅನುದಾನ ದೊರಕಿರುವುದು ರಾಜ್ಯದಲ್ಲೇ ಪ್ರಥಮ. ಅದನ್ನು ಗಮನಿಸಬೇಕು ಎಂದ ರೈ, ಈ ಕೆಲಸಗಳಿಗಾಗಿ ತಾನು ಎಷ್ಟು ಪ್ರಯತ್ನಪಟ್ಟಿದ್ದೇನೆ ಎಂಬುದು ನನಗೆ ಮತ್ತು ದೇವರಿಗೆ ಮಾತ್ರ ಗೊತ್ತು ಎಂದರು.
ತಾನು ಎಂದಿಗೂ ಕೆಲಸದಲ್ಲಿ ಉದಾಸೀನ ಮಾಡಿಲ್ಲ. ಬಂಟ್ವಾಳ ಕ್ಷೇತ್ರದ ಜನರಿಗೆ ಬೇಕಾದ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಜನರ ಬೇಡಿಕೆಯಂತೆ ಕೆಲಸ ನಿರ್ವಹಿಸಿದ್ದೇನೆ ಎಂದು ಹೇಳಿದ ರೈ, ಆದರೂ ಈ ಯೋಜನೆಗಳನ್ನು ಕಡೆಗಣಿಸಿ, ತನ್ನ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇನ್ನೇನಿದ್ದರು ತಾನು ಮಾಡಿದ ಕೆಲಸಗಳನ್ನು ಮುಂದುವರಿಸುವುದಷ್ಟೇ ಕೆಲಸ ಎಂದು ಹೇಳಿದರು
ಶಂಕುಸ್ಥಾಪನೆ ಆದ ಪಶ್ಚಿಮವಾಹಿನಿ ಯೋಜನೆಯ ನೀರಾವರಿ ಯೋಜನೆ, 150 ಕೋಟಿ ರೂ. ವೆಚ್ಚದಲ್ಲಿ ಬಿ.ಸಿ.ರೋಡಿನಿಂದ ಪುಂಜಾಲಕಟ್ಟೆಯವರೆಗೆ ದ್ವಿಪಥ ರಸ್ತೆ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕಿದೆ. ಅದರಲ್ಲಿ 100 ಕೋಟಿ ರಸ್ತೆ ನಿರ್ಮಾಣಕ್ಕೆ ಹಾಗೂ 50 ಕೋಟಿ ರೂ ಭೂಸ್ವಾಧೀನಕ್ಕೆ ಮೀಸಲಾಗಿದೆ. ಇದರ ಟೆಂಡರ್ ಕೂಡಾ ಕರೆಯಲಾಗಿದೆ ಶೀಘ್ರವಾಗಿ ಕೆಲಸ ಪ್ರಾರಂಭವಾಗಲಿದೆ ಎಂದು ರಮಾನಾಥ ರೈ ಹೇಳಿದರು.
ತ್ಯಾಜ್ಯ ಸಂಸ್ಕರಣೆಗೆ ಪೈರೋಲಿಸಿಸ್ ಯಂತ್ರ
ತಾನು ಸಚಿವನಾಗಿದ್ದಾಗ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್ ಮುತುವರ್ಜಿಯಲ್ಲಿ ಪುರಸಭೆಗೆ ತ್ಯಾಜ್ಯ ಸುಲಭ ವಿಲೇವಾರಿಗಾಗಿ ಪೈರೋಲಿಸಿಸ್ ಯಂತ್ರ ಖರೀದಿಸಿ, ಅಳವಡಿಸುವ ಕುರಿತು ನಿರ್ಣಯಗಳಾಗಿದ್ದು, ಕೆಲಸ ಪ್ರಗತಿಯಲ್ಲಿದೆ. ಈಗಾಗಲೇ ಪುರಸಭೆಗೆ ಸಂಬಂಧಿಸಿ ಒಳಚರಂಡಿ, ಕುಡಿಯುವ ನೀರು, ತ್ಯಾಜ್ಯ ಶುದ್ಧೀಕರಣಕ್ಕೆ ಬೇಕಾದ ಸೌಕರ್ಯಗಳನ್ನು ತನ್ನ ಅವಧಿಯಲ್ಲೇ ಒದಗಿಸಲಾಗಿದೆ. ಹೊಸದಾಗಿ ಇದನ್ನು ಮಾಡುವ ಬದಲು ಇದ್ದದ್ದನ್ನು ಮುಂದುವರಿಸಿಕೊಂಡು ಹೋದರೆ ಸಾಕು, ತಾನು ಏನೂ ಮಾಡಿಲ್ಲ ಎಂಬರ್ಥದಲ್ಲಿ ಹೇಳುವುದು ಸರಿ ಎನಿಸುವುದಿಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಬಿ.ಎಚ್.ಖಾದರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಮಂಜುಳಾ ಮಾಧವ ಮಾವೆ, ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಬೇಬಿ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.