ಬಂಟ್ವಾಳ

ಜಿಲ್ಲಾಧಿಕಾರಿ ಭೇಟಿ: ಬದಲಿ ರಸ್ತೆ ವ್ಯವಸ್ಥೆ

ಮೂಲರಪಟ್ನದಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆ ಕುಸಿತದ ಸ್ಥಳಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಸಹಿತ ಅಧಿಕಾರಿಗಳ ದಂಡು ಆಗಮಿಸಿ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆದರು.

ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಽಕಾರಿ ಡಾ| ಎಂ.ಆರ್. ರವಿ, ಮಂಗಳೂರು ಉಪವಿಭಾಗದ ಸಹಾಯಕ ಕಮೀಷನರ್ ರೇಣುಕಾ ಪ್ರಸಾದ್, ಬಂಟ್ವಾಳ ಪ್ರಭಾರ ತಹಶೀಲ್ದಾರ್ ಸಂತೋಷ್ ಜಿ. ಹಾಗೂ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳಾದ ಉಮೇಶ್ ಭಟ್, ರವಿ ಕುಮಾರ್, ಆರ್.ಟಿ.ಒ. ಜಾನ್ ಮಿಸ್ಕಿತ್ ಮೊದಲಾದವರು ಈ ವೇಳೆ ಹಾಜರಿದ್ದರು.

ಸೋಮವಾರ ಸಂಜೆ ಮೂಲರಪಟ್ನ ಫಲ್ಗುಣಿ ನದಿಯ ಸೇತುವೆ ಕುಸಿದ ಪರಿಣಾಮವಾಗಿ ಬಂಟ್ವಾಳ ಹಾಗೂ ಮಂಗಳೂರು ತಾಲೂಕುಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಇದೀಗ ಸ್ಥಳೀಯರಿಗೆ ಬದಲಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಸಹಿತ ಸ್ಥಳವನ್ನು ಪರಿಶೀಲಿಸಿದರು.

ಬಸ್‌ಗಾಗಿ ಮನವಿ: ಈ ಸಂದರ್ಭ ಮೂಲರಪಟ್ನ ಮತ್ತು ಮುತ್ತೂರು ಭಾಗಗಳ ಜನರು ಪರಸ್ಪರ ಮಂಗಳೂರು ಮತ್ತು ಬಂಟ್ವಾಳ ತಾಲೂಕುಗಳಿಗೆ ಸಂಚರಿಸಲು ಅನುಕೂಲವಾಗುವ ದೃಷ್ಟಿಯಿಂದ ಸರಕಾರಿ ಬಸ್ ವ್ಯವಸ್ಥೆಗೊಳಿಸುವಂತೆ ಅರಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಗದೀಶ್ ಆಳ್ವ ಜಿಲ್ಲಾದಿಕಾರಿಯವರಿಗೆ ಮನವಿ ಸಲ್ಲಿಸಿದರು.

2017ರಲ್ಲಿ ಈ ಸೇತುವೆಯ ದು:ಸ್ಥಿತಿಯ ಕುರಿತಾಗಿ ಜಿಲ್ಲಾಡಳಿತ, ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿರುವುದನ್ನು ಮತ್ತು ಆಗ ಈ ಸೇತುವೆಗೆ ಯಾವುದೇ ಅಪಾಯವಿಲ್ಲವೆಂದು ಇಂಜಿನಿಯರ್‌ಗಳು ಭರವಸೆ ನೀಡಿರುವುದನ್ನು ಕೂಡಾ ಸ್ಥಳೀಯರು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಇಲ್ಲಿನ ಶಾಲಾ ಕಾಲೇಜು ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡುವ ನಿಟ್ಟಿನಲ್ಲಿ ಪಕ್ಕದ ತೂಗುಸೇತುವೆಯ ತನಕ ತೆರಳಲು ಮಂಗಳೂರು ಮತ್ತು ಬಂಟ್ವಾಳ ಭಾಗದಲ್ಲಿ ಮಿನಿ ಬಸ್, ಲಘು ವಾಹನಗಳ ಸಂಚಾರಕ್ಕೆ ಹಾಗೆಯೇ ಮೂಲರಪಟ್ನ, ಬಿ.ಸಿ.ರೋಡ್ ಮಾರ್ಗವಾಗಿ ಮಂಗಳೂರಿಗೆ 2 ಸರಕಾರಿ ಬಸ್ ಸೌಲಭ್ಯವನ್ನು ಈ ಕೂಡಲೇ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಽಕಾರಿ ಶಶಿಕಾಂತ್ ಸೆಂಥಿಲ್ ಅವರು ಭರವಸೆ ನೀಡಿದರು.
ಕೊಳತ್ತಮಜಲು , ಪೊಳಲಿ, ಕೈಕಂಬ ಮೂಲಕ ಈಗಾಗಲೇ ಸಂಚರಿಸುತ್ತಿರುವ ಸರಕಾರಿ ಬಸ್ಸನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಮೂಲರಪಟ್ನಕ್ಕೂ ಬರುವಂತೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಈ ಸಂದರ್ಭದಲ್ಲಿ ಹೇಳಿದರು.

ತೂಗು ಸೇತುವೆಯ ಇಕ್ಕೆಲಗಳಲ್ಲಿ ತೆರಳಲು ರಸ್ತೆ, ಕಾಲು ಸಂಕವನ್ನು ತಕ್ಷಣದಿಂದ ದುರಸ್ಥಿಗೊಳಿಸಿ ಸುಸ್ಥಿತಿಗೆ ತರುಲು ಕ್ರಮಕೈಗೊಳ್ಳುವಂತೆ ಸ್ಥಳದಲ್ಲಿದ್ದ ಲೋಕೋಪಯೋಗಿ ಇಂಜಿನಿಯರ್‌ಗಳಿಗೆ ಸೂಚಿಸಿದರು.

ರಸ್ತೆಯ ದುರಸ್ತಿ ಕಾರ್ಯ:
ಸೇತುವೆ ಕುಸಿತ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಹಾಗೂ ಲೋಕೋಪಯೋಗಿ ಇಲಾಖಾ ಇಂಜಿನಿಯರ್‌ಗಳು ಬದಲಿ ವ್ಯವಸ್ಥೆಯ ರಸ್ತೆಯನ್ನು ಪರಿಶೀಲಿಸಿ ತಕ್ಷಣದಿಂದಲೇ ದುರಸ್ಥಿ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ತೂಗು ಸೇತುವೆಯನ್ನು ಸಂಪರ್ಕಿಸುವ ಇಕ್ಕೆಲಗಳಲ್ಲಿ ರಸ್ತೆಗೆ ಅಡ್ಡಿಯಾಗಿರುವ ಪೊದೆಯನ್ನು ತೆರವುಗೊಳಿಸುವ, ಮೋರಿದುರಸ್ಥಿ ಹಾಗೂ ರಸ್ತೆಯನ್ನು ಸಮತಟ್ಟುಗೊಳಿಸುವ ಕಾರ್ಯ ಆರಂಭಗೊಂಡಿದೆ.

ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯರಾದ ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಪ್ರಮುಖರಾದ ಗೋವಿಂದ ಪ್ರಭು, ದೇವಪ್ಪ ಪೂಜಾರಿ, ಆರ್‌ಐ ನವೀನ್, ಗ್ರಾಮಕರಣಿಕರಾದ ಜನಾರ್ದನ,ತೌಫೀಕ್, ಅಮೃತಾಂಶು,ಸಿಬಂದಿಗಳು ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ