ನಿನ್ನೆ ಕುಸಿದಿರುವ ಮೂಲರಪಟ್ನ ಸೇತುವೆ ಉಳಿದೆಲ್ಲ ಸೇತುವೆಗಳಲ್ಲಿ ಸಂಚರಿಸುವವರಿಗೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ.
ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಪ್ರಕಾರ, ಮಂಗಳೂರಿನ ತಾಲೂಕಿನ ಗುರುಪುರ ಮತ್ತು ಪುಚ್ಚಮುಗೆರು ಹಳೆ ಸೇತುವೆಗಳು ಕೂಡಾ ಶಿಥಿಲಾವ್ಯವಸ್ಥೆಯಲ್ಲಿದೆ.
ಅಧಿಕಾರಿಗಳು ಈ ಬಗ್ಗೆ ಎಚ್ಚತ್ತುಕೊಳ್ಳಬೇಕು. ಇಲ್ಲದಿದ್ದರೆ ಫಲ್ಗುಣಿ ಸೇತುವೆಯ ಸ್ಥಿತಿ ಎದುರಾಗಬಹುದು. ಫಲ್ಗುಣಿ ಕುಸಿತಕ್ಕೆ ಅವೈಜ್ಞಾನಿಕ ಮರಳುಗಾರಿಕೆ ಮತ್ತು ಇಲಾಖಾ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂಬುದು ಅವರ ಅಭಿಪ್ರಾಯ.
ಬಂಟ್ವಾಳ, ಮಂಗಳೂರು ತಾಲೂಕುಗಳಲ್ಲಿರುವ ಹಳೇ ಸೇತುವೆಗಳ ಅಧ್ಯಯನ ಮಾಡಿದರೆ, ಇನ್ನಷ್ಟು ಇಂಥ ಸೇತುವೆಗಳು ದೊರಕೀತು ಎಂಬುದು ಸ್ಥಳೀಯರ ಅಭಿಪ್ರಾಯ. ಆದರೆ ಮೂಲರಪಟ್ನ ಸೇತುವೆ ಕುಸಿಯಲು ಸೇತುವೆಯ ವಯಸ್ಸು ಕಾರಣವಲ್ಲ, ಅದಕ್ಕೆ ನಾನಾ ಕಾರಣಗಳಿವೆ. ಈ ಮೊದಲೇ ಸ್ಥಳೀಯರು ಎಚ್ಚರಿಸಿದ್ದರೂ ಜನಪ್ರತಿನಿಧಿಗಳಾಗಲಿ, ಆಡಳಿತವಾಗಲಿ ಗಮನ ಕೊಟ್ಟಿರಲಿಲ್ಲ. ಈಗ ಸೇತುವೆ ಕುಸಿದ ಮೇಲೆ ಬಂದು ನೋಡಿ ಹೋದರೆ ಏನು ಪ್ರಯೋಜನ ಎಂಬುದು ಜನರ ಅನಿಸಿಕೆ.