ಜನರ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಬದ್ಧನಾಗಿದ್ದು, ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ನನ್ನ ಇತಿಮಿತಿಗಳಲ್ಲಿ ಜನರ ಆಶೋತ್ತರ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಮೊಡಂಕಾಪುವಿನಲ್ಲಿರುವ ಭಾರತೀಯ ಸೇನೆಯ ಯೋಧ ದಿ. ಐಸಾಕ್ ಮೆಂಡೋನ್ಸಾ ಅವರ ಪತ್ನಿ ಲೀನಾ ಐಸಾಕ್ ಮೆಂಡೋನ್ಸಾ ಮನೆಯಲ್ಲಿ ಬಿಜೆಪಿ ರೈತಮೋರ್ಚಾ ಕಾರ್ಯದರ್ಶಿ ಜೆರಾಲ್ಡ್ ಡಿಸೋಜ ನೇತೃತ್ವದಲ್ಲಿ ಸ್ಥಳೀಯ ಅಭಿಮಾನಿಗಳು ಶುಕ್ರವಾರ ಸಂಜೆ ಏರ್ಪಡಿಸಿದ ಸನ್ಮಾನ, ಅಭಿನಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಶಾಸಕರು, ಹಾರ, ಸನ್ಮಾನಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಜನರ ಕೆಲಸ ಕಾರ್ಯಗಳನ್ನು ಮುತುವರ್ಜಿ ವಹಿಸಿ ನಿರ್ವಹಿಸುವುದು ತನ್ನ ಕರ್ತವ್ಯ ಎಂದು ಹೇಳಿದರು.
ಲೀನಾ ಅವರ ಪತಿ ಐಸಾಕ್ ಮೆಂಡೋನ್ಸಾ ಅವರ ಪತಿ ಸೈನ್ಯದಲ್ಲಿದ್ದು, ನಿಧನ ಹೊಂದಿದ್ದಾರೆ. ದೇಶಕ್ಕಾಗಿ ದುಡಿಯುವ ಯೋಧರ ಮನೆಯವರು ನೆಮ್ಮದಿಯಿಂದ ಜೀವನ ಸಾಗಿಸುವಂತೆ ಮಾಡುವುದು ಆಡಳಿತದ ಕರ್ತವ್ಯವೂ ಹೌದು ಎಂದು ಈ ಸಂದರ್ಭ ಶಾಸಕರು ಅಭಿಪ್ರಾಯಪಟ್ಟರು.
ಬೀದಿದೀಪ, ಕುಡಿಯುವ ನೀರಿನ ಸಹಿತ ಯಾವುದೇ ಸೌಕರ್ಯಗಳು ಇದುವರೆಗೆ ತಮ್ಮ ಭಾಗಕ್ಕೆ ಒದಗಿಬಂದಿಲ್ಲ ಎಂದು ಗಮನ ಸೆಳೆದ ಸ್ಥಳೀಯರು, ಈ ಕುರಿತು ಗಮನ ಹರಿಸುವಂತೆ ಶಾಸಕರಿಗೆ ಮನವಿಪತ್ರಗಳನ್ನು ನೀಡಿದರು.
ಈ ಸಂದರ್ಭ ಬಿಜೆಪಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ, ಸ್ಥಳೀಯ ಪ್ರಮುಖರಾದ ಹೆರಾಲ್ಡ್ ಮಿನೇಜಸ್, ಕಿರಣ್, ಮ್ಯಾಕ್ಸಿಂ ಲೋಬೊ ಮತ್ತಿತರರು ಉಪಸ್ಥಿತರಿದ್ದರು. ಚಂದ್ರಹಾಸ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನಿಲ್ ಲೂವಿಸ್ ವಂದಿಸಿದರು. ಈ ಸಂದರ್ಭ ಹಾಜರಿದ್ದ ಸ್ಥಳೀಯರು ಹಲವು ಅಹವಾಲುಗಳನ್ನು ಶಾಸಕರ ಮುಂದಿಟ್ಟರು.