ಯೋಗ ದಿನಾಚರಣೆಯನ್ನು ವಿಶ್ವದಾದ್ಯಂತ ನಡೆಸುವಂತೆ ಪ್ರಚೋದಿಸಿದ, ವಿಶ್ವವನ್ನೇ ನಿಬ್ಬೆರಗಾಗಿ ನೋಡುವಂತೆ ಮಾಡಿದ ಕೀರ್ತಿ ಮಾನ್ಯ ಪ್ರಧಾನಮಂತ್ರಿ ಮೋದಿಜಿಯವರಿಗೆ ಸಲ್ಲಬೇಕು.
ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಿಕೊಂಡು ಬಂದಿರುವುದು ಅರ್ಥಪೂರ್ಣವೇ ಸರಿ. ಯೋಗ ಎನ್ನುವುದಕ್ಕೆ ಸೇರುವುದು, ಕೂಡುವುದು ಎನ್ನುವ ಅರ್ಥವಿದೆ. ಜೀವನು ದೇವನೊಂದಿಗಿನ ಅನುಸಂಧಾನವೂ ಹೌದು. ಮನುಷ್ಯನ ಬದುಕಿನ ಲಕ್ಷ್ಯ ಸಾಕ್ಷಾತ್ಕಾರವೇ. ಯೋಗಾಸನ, ಪ್ರಾಣಾಯಾಮವು ಮನುಷ್ಯನ ಆರೋಗ್ಯವನ್ನು ಆಯುಷ್ಯವನ್ನು ವೃದ್ಧಿಸುತ್ತದೆ. ಮನಸ್ಸು ಮತ್ತು ಶರೀರದ ಸ್ವಾಸ್ಥ್ಯವನ್ನು ಕಾಪಿಡುತ್ತದೆ.
ಜೊತೆಗೆ ಆಹಾರ-ವಿಹಾರ ಇತ್ಯಾದಿ ಇದಕ್ಕೆ ಪೂರಕವಾಗಿರಬೇಕು. ಸಾತ್ವಿಕತೆಯಿಂದ ಸಾರ್ಥಕ ಬದುಕು ಎಂಬಂತೆ ನಾವು ರೂಢಿಸಿಕೊಳ್ಳಬೇಕು. ಯೋಗಾಸನ, ಪ್ರಾಣಾಯಾಮ ನಿರಂತರವಾಗಿ ಮಾಡುತ್ತಿದ್ದರೆ ಇದೆಲ್ಲ ಸಾಧ್ಯ.
ಪತಂಜಲಿ ಮಹರ್ಷಿಯನ್ನು ಈ ಬಗ್ಗೆ ಕೊಂಡಾಡಬೇಕು. ಅಷ್ಟಾಂಗ ಯೋಗದ ಮಾರ್ಮಿಕ ಸತ್ಯವನ್ನು ತೆರೆದಿಟ್ಟ ಕೀರ್ತಿ ಇವರದು. ಆರೋಗ್ಯಪೂರ್ಣ ಸಮಾಜನಿರ್ಮಾಣದಲ್ಲಿ ಯೋಗದ ಪಾತ್ರ ಮಹತ್ತರವಾದುದು. ಶ್ವಾಸ ಇರುವಾಗಲೇ ವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ವಿಶ್ವದ ಶ್ವಾಸವೆನಿಸಿದ ಅಧ್ಯಾತ್ಮಿಕತೆ ಭಾರತದ ಅಂತರ್ಯ. ಅರಿತು ಬಾಳುವ ಬದುಕು ನಮ್ಮದಾದಾಗ ಸಮಾಜದ ಕೊಂಡಿಯಾಗುತ್ತೇವೆ. ಇಲ್ಲಿ ಅಡಗಿದೆ ಮಾನವೀಯ ಮೌಲ್ಯಗಳು.
– ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಒಡಿಯೂರು.