ಗ್ರಾಮ ಪಂಚಾಯತ್ ವ್ಯಾಪ್ತಿಯ ಅಲ್ಲಿಪಾದೆ, ಉಜಿರಾಡಿ ಕ್ವಾಟ್ರಸ್‌ನಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿರುವ ಬಡ ಕುಟುಂಬಕ್ಕೆ ಸರ್ಕಾರಿ ಜಮೀನು ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದ್ದಾರೆ.
ಇಲ್ಲಿನ ಸಂಜೀವ-ಸುನಂದ ದಂಪತಿ, ನಾಲ್ಕು ಮಕ್ಕಳ ಜೊತೆ ವಾಸಕ್ಕೆ ಸರಿಯಾದ ಮನೆ ಇಲ್ಲದೆ ತಾತ್ಕಾಲಿಕವಾಗಿ ನಿರ್ಮಿಸಿದ ಗುಡಿಸಲಿನಲ್ಲಿ ವಾಸವಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದ ಹಿನ್ನೆಲೆಯಲ್ಲಿ ಅವರು ಗುರುವಾರ ಸ್ಥಳಕ್ಕೆ ಭೇಟಿ ನೀಡಿದರು.
ಇದೇ ಸಂದರ್ಭ ಮಕ್ಕಳಿಗೆ ಶಾಲೆಗೆ ಹೋಗಲು ಅಗತ್ಯವಿರುವ ಕೆಲ ಸಲಕರಣೆಗಳನ್ನು ಒದಗಿಸುವ ಭರವಸೆ ನೀಡಿದ ಅವರು, ೯೪ ಸಿ ಯೋಜನೆಯಡಿ ನಿವೇಶನದ ಹಕ್ಕು ಪತ್ರ ಒದಗಿಸಲು ಭರಿಸಬೇಕಾದ ಶುಲ್ಕವನ್ನು ವೈಯುಕ್ತಿಕ ನೆಲೆಯಲ್ಲಿ ಭರಿಸುವುದಾಗಿ ತಿಳಿಸಿದರು. ಈ ಬಡಕುಟುಂಬಕ್ಕೆ ತಾತ್ಕಾಲಿಕ ಮನೆ ನಿರ್ಮಾಣ ಕಾರ್ಯ ನಡೆಸುತ್ತಿರುವ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ನ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು, ಗ್ರಾಮಪಂಚಾಯತ್ ನಿಂದ ವಸತಿ ಯೋಜನೆಯಡಿ ಮನೆ ನಿರ್ಮಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಗ್ರಾ.ಪಂ.ಉಪಾಧ್ಯಕ್ಷರಿಗೆ ಸೂಚಿಸಿದರು. ಗ್ರಾ.ಪಂ.ಉಪಾಧ್ಯಕ್ಷ ದಯಾನಂದ ಶೆಟ್ಟಿ, ವಿಠಲ ಅಲ್ಲಿಪಾದೆ ಈ ಸಂಧರ್ಭ ಶಾಸಕರ ಜೊತೆಗಿದ್ದರು