ಬಂಟ್ವಾಳ

ಮೇಲ್ಕಾರ್: ಗಾಳಿಗೆ ಉರುಳಿದ ಮರ, ಹೂಕುಂಡ ನಿರ್ಮಿಸುವ ವ್ಯಕ್ತಿ ಸಾವು

www.bantwalnews.com

ಪಾಣೆಮಂಗಳೂರಿನಿಂದ ಮೇಲ್ಕಾರ್ ಕಡೆಗೆ ಸೇರುವ ಜಾಗದಲ್ಲಿ ಉಲ್ಲಾಸ್ ಕ್ರೀಮ್ ಪಾರ್ಲರ್ ಎದುರು ಬೃಹತ್ ಅಶ್ವತ್ಥ ಮರವೊಂದು ಜೋಪಡಿಯ ಮೇಲೆ ಉರುಳಿ ಓರ್ವ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡಿದ್ದಾರೆ. ಬುಧವಾರ ಮಧ್ಯಾಹ್ನ ಸುಮಾರು 3.30ರ ವೇಳೆ ಘಟನೆ ನಡೆದಿದೆ.

ಜಾಹೀರಾತು

ಜೋಪಡಿ ನಿರ್ಮಿಸಿ ಹೂಕುಂಡ ಸಹಿತ ಸಿಮೆಂಟ್ ನಿರ್ಮಾಣಗಳನ್ನು ಮಾಡಿ ಜೀವನೋಪಾಯ ಸಾಗಿಸುತ್ತಿದ್ದ ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯ ರಾಮ್ ಸೇವಕ್ (36)  ಮೃತಪಟ್ಟವರು. ವಿವಾಹಿತರಾಗಿರುವ ಇವರು ಉತ್ತರ ಪ್ರದೇಶದಿಂದ ಬಂದು ಹೆದ್ದಾರಿ ಬದಿಯಲ್ಲಿ ಸಿಮೆಂಟ್  ನ ಹೂಕುಂಡ ಇತ್ಯಾದಿ ರಚನೆಗಳನ್ನು ಮಾಡಿ ಮಾರುತ್ತಿದ್ದರು. ಇವರೊಂದಿಗಿದ್ದ ಅದೇ ರಾಜ್ಯದ ದಿಲೀಪ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಹೇಗೆ ನಡೆಯಿತು ಘಟನೆ:

ಬೆಳಗ್ಗಿನಿಂದಲೇ ಭಾರಿ ಮಳೆ ಪರಿಸರದಲ್ಲಿ ಸುರಿಯುತ್ತಿದ್ದು, ಮಧ್ಯಾಹ್ನದ ವೇಳೆ ಗಾಳಿಯೂ ತೀವ್ರಗೊಂಡಿತ್ತು. ಇದರೊಂದಿಗೆ ಮಣ್ಣು ಸಡಿಲಗೊಳ್ಳುತ್ತಿತ್ತು. ಜೋಪಡಿ ನಿರ್ಮಿಸಿ ಮರದ ಬುಡದಲ್ಲೇ ವಾಸಿಸುತ್ತಿದ್ದ ರಾಮ್ ಸೇವಕ್ ಅಲ್ಲೇ ಪಕ್ಕದಲ್ಲಿ ಶೌಚಗೃಹವನ್ನೂ ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿದ್ದ. ಮಧ್ಯಾಹ್ನ ರಾಮ್ ಸೇವಕ್ ಜೋಪಡಿ ಪಕ್ಕ ಶೌಚಗೃಹಕ್ಕೆ ಹೋಗಿದ್ದ ವೇಳೆ, ಮರ ನೇರವಾಗಿ ಆತನ ಮೇಲೆ ಬಿದ್ದು ಅಪ್ಪಚ್ಚಿಯಾಗಿದ್ದಾನೆ. ಕೂಡಲೇ ಸುದ್ದಿ ತಿಳಿದು ಸ್ಥಳೀಯರ ಸಹಾಯದಿಂದ ಆತನನ್ನು ತುಂಬೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ.  

ಬಂಟ್ವಾಳ ನಗರ ಪೊಲೀಸ್ ಎಸ್.ಐ. ಚಂದ್ರಶೇಖರ್ ಮತ್ತು ಸಿಬ್ಬಂದಿ, ಬಂಟ್ವಾಳ ತಹಶೀಲ್ದಾರ್ ಸಂತೋಷ್, ಗ್ರಾಮಕರಣಿಕರಾದ ನಾಗರಾಜ್, ಸಿಬ್ಬಂದಿಗಳಾದ ಸದಾಶಿವ ಕೈಕಂಬ, ಅಶೋಕ್, ಯಶೋಧ ಮಹಜರು ನಡೆಸಿದರು. ಸ್ಥಳಕ್ಕೆ ಅರಣ್ಯ, ಅಗ್ನಿಶಾಮಕ ಠಾಣಾ ಸಿಬ್ಬಂದಿಯಲ್ಲದೆ, ಸಂಚಾರಿ ಪೊಲೀಸರೂ ಆಗಮಿಸಿದ್ದರು.

photo courtesy: Kishor peraje

 

 

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.