www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಕಳೆದ ಎರಡು ದಿನಗಳಿಂದ ಸುರಿದ ಗಾಳಿ-ಮಳೆಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯ 5ನೇ ವಾರ್ಡ್ನ ಬಡ್ಡಕಟ್ಟೆ-ಹೊಸಮಾರು ಸಂಪರ್ಕಿಸುವ ಕಿರು ಸೇತುವೆಯೊಂದು ಮಂಗಳವಾರ ಮುರಿದು ಬಿದ್ದಿದೆ. ಸುದ್ದಿ ತಿಳಿದ ಸ್ಥಳೀಯ ಪುರಸಭಾ ಸದಸ್ಯ ಪ್ರವೀಣ್ ಬಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪುರಸಭೆಯ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ, ಇಂಜಿನೀಯರ್ ಡೊಮೆನಿಕ್ ಡಿಮೆಲ್ಲೊ ಅವರು ಕೂಡಾ ಸ್ಥಳಕ್ಕೆ ಆಗಮಿಸಿ, ನಷ್ಟದ ಬಗ್ಗೆ ಅಂದಾಜಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸದಸ್ಯ ಪ್ರವೀಣ್, ಎರಡು ದಿನಗಳ ಮಳೆಯಿಂದ ಈ ಹಳೆ ಸೇತುವೆ ಒಂದು ಭಾಗದ ಆಧಾರ ಸ್ಥಂಭ ಕೊಚ್ಚಿಹೋಗಿ ಕುಸಿದಿದೆ. ಇದಕ್ಕೆ ತಾತ್ಕಾಲಿಕ ಕಾಲುಸಂಕ ನಿರ್ಮಿಸಲು ಈಗಾಗಲೇ ಸಂಬಂಧಿಸಿದವರಿಗೆ ಸೂಚನೆ ನೀಡಲಾಗಿದೆ. ಶಾಶ್ವತ ಕಿರುಸೇತುವೆ ನಿರ್ಮಾಣಕ್ಕೆ ಶಾಸಕರಿಗೂ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಏನಾಗಿದೆ?
ಕಿರು ಸೇತುವೆಯ ಒಂದು ಭಾಗದ ಆಧಾರಸ್ತಂಭ ತೋಡಿನ ನೀರಿನಲ್ಲಿ ಕೊಚ್ಚಿಹೋಗಿದ್ದು ಪರಿಣಾಮ ಕಿರು ಸೇತುವೆ ಕುಸಿದು ಬಿದ್ದಿದ್ದು, ಹೊಸಮಾರು ಹಾಗೂ ಬಡ್ಡಕಟ್ಟೆ ಮಧ್ಯೆ ಸಂಚಾರದ ಸಂಪರ್ಕ ಕೊಂಡಿ ಕಳಚಿದೆ. ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಬೀಡಿ ಕಾರ್ಮಿಕರು ಈ ಸೇತುವೆಯನ್ನು ಅವಲಂಬಿಸುತ್ತಿದ್ದಾರೆ. ಈ ಕಿರು ಸೇತುವೆಯು 1996ರಲ್ಲಿ ನಿರ್ಮಾಣಗೊಂಡಿದ್ದು, ಸುಮಾರು 22ವರ್ಷಗಳ ಕಾಲ ಬಾಳಿಕೆ ಬಂದಿತ್ತು. ಇದೀಗ ಕುಸಿದು ಬಿದ್ದಿದ್ದು, ಈ ಭಾಗದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ.
ಹಲವೆಡೆ ಹಾನಿ:
ಮಳೆಗೆ ಬಂಟ್ವಾಳ, ವಿಟ್ಲ ಭಾಗದ ಹಲವೆಡೆ ಮನೆಗಳಿಗೆ ಹಾನಿಯಾದ ಕುರಿತು ವರದಿಯಾಗಿದೆ. ಬಾಳೆಪುಣಿ ಗ್ರಾಮದ ಮುದುಂಗಾರು ಕಟ್ಟೆ ಸಮೀಪದ ದುರ್ಗಲಾಪು ಎಂಬಲ್ಲಿ ನಬಿಸಾ ಎಂಬವರ ಮನೆಯ ತಡೆಗೋಡೆ ಕುಸಿದು ಬಿದ್ದು, ಹಾನಿ ಸಂಭವಿಸಿದೆ. ಬಾಳೆಪುಣಿ ಗ್ರಾಮ ಪಂ, ಪಿಡಿಒ, ಅದ್ಯಕ್ಷರು, ಹಾಗೂ ಸದಸ್ಯರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾಣಿಲದ ಚಂದ್ರಾವತಿ ಹಾಗೂ ದೇವಕಿ ಎಂಬರಿಗೆ ಸೇರಿದ ಮನೆಗಳಿಗೆ ಹಾನಿ, ಪೆರುವಾಯಿ ಅಬ್ಬಾಸ್ ಅಲಿ ಎಂಬವರ ಮನೆಗೆ ಹಾನಿ, ಕನ್ಯಾನದಲ್ಲಿ ಯಮುನಾ ಎಂಬವರಿಗೆ ಸೇರಿದ ಮನೆಗೆ ಹಾನಿಯಾಗಿದ್ದು, ನಷ್ಟ ಉಂಟಾಗಿದೆ.