www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಪ್ರತಿ ವರ್ಷ ಮಳೆಗಾಲದಲ್ಲಿ ರಸ್ತೆ ಬದಿಯಲ್ಲಿ ಕೆಸರು ನೀರು ನಿಲ್ಲುವುದು ಸಾಮಾನ್ಯ ಸಂಗತಿ. ಆದರೆ ಈ ವರ್ಷದ ಮಳೆಗಾಲ ಡಬ್ಬಲ್ ಸಂಕಟ ತಂದಿದೆ.
ಇದೀಗ ಬಂಟ್ವಾಳ ತಾಲೂಕಿನ ಹೆದ್ದಾರಿ ಬದಿಯಲ್ಲಿ ಸಂಚರಿಸುವವರು, ಬಸ್ಸಿಗೆ ನಿಲ್ಲುವವರಷ್ಟೇ ಅಲ್ಲ, ಸಾಮಾನ್ಯ ರಸ್ತೆ ಪಕ್ಕವೂ ಪಾದ ಹೂತು ಹೋಗುವಷ್ಟು ಕೆಸರು ಕಾಣಲು ಸಿಗುತ್ತದೆ. ಶಾಲಾ ಮಕ್ಕಳ ಪೈಕಿ ಒಬ್ಬರಲ್ಲದಿದ್ದರೆ ಒಬ್ಬರು ಮುಗ್ಗರಿಸಿ ಬೀಳುವುದು ಸಾಮಾನ್ಯ ಸಂಗತಿ ಎಂಬಂತಾಗಿದೆ. ಬಂಟ್ವಾಳ ತಾಲೂಕು ಕೇಂದ್ರಸ್ಥಳವಾದ ಬಿ.ಸಿ.ರೋಡ್ ನಲ್ಲಿ ಪ್ರಯಾಣಿಕರು ಬಸ್ಸಿಗಾಗಿ ಕಾಯುವ ಸ್ಥಳ, ಪಾಣೆಮಂಗಳೂರು, ಮೇಲ್ಕಾರ್, ಬಂಟ್ವಾಳ ಬೈಪಾಸ್, ಬಡ್ಡಕಟ್ಟೆ, ಕಲ್ಲಡ್ಕ, ಮಾಣಿ ಪರಿಸರದಲ್ಲಿ ರಸ್ತೆ ಬದಿಯಲ್ಲಿ ಅಂಟುಮಣ್ಣಿನ ಕೆಸರು ನಡೆದಾಡಲೂ ಕಷ್ಟವಾಗುವಂತಿದೆ. ವ್ಯಾಪಾರ ವಹಿವಾಟಿಗೂ ಇದು ಏಟು ಕೊಟ್ಟರೆ, ವಾಹನಗಳು ಹೂತು ಹೋಗುತ್ತವೆ.
ಕಳೆದೊಂದು ವರ್ಷದಿಂದ ರಸ್ತೆ ಬದಿಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವ ಕಾರ್ಯ ತಾಲೂಕಿನಾದ್ಯಂತ ಭರದಿಂದ ಸಾಗುತ್ತಿದೆ. ಸಾಮಾನ್ಯವಾಗಿ ರಸ್ತೆ ಅಗೆದ ಬಳಿಕ ಆ ಮಣ್ಣನ್ನು ಮುಚ್ಚಿ ಸಮತಟ್ಟುಗೊಳಿಸಿ, ರಸ್ತೆ ಮೊದಲಿದ್ದಂತೆ ಮಾಡಿ ಹೋಗಬೇಕಾಗಿರುವುದು ಅಗೆದವರು ಹಾಗು ಅದಕ್ಕೆ ಸಂಬಂಸಿದ ಇಲಾಖೆಗಳ ಕೆಲಸ. ಆದರೆ ಸದ್ಯಕ್ಕೆ ರಸ್ತೆ ಅಗೆತ ಮಾತ್ರವಷ್ಟೇ ಆಗುತ್ತಿದೆ. ಒಂದು ಕಡೆ ಸುಂದರ ರಸ್ತೆ ನಿರ್ಮಾಣವಾದರೆ, ಮತ್ತೊಂದು ಕಡೆ ರಸ್ತೆ ಪಕ್ಕವೆಲ್ಲ ಅಗೆದು ಮಣ್ಣನ್ನು ರಸ್ತೆ ಬದಿಯೇ ಹಾಕಲಾಗುತ್ತದೆ. ಮಳೆ ಬಂದ ಕೂಡಲೇ ಆ ಮಣ್ಣು ರಸ್ತೆ ಪಕ್ಕ ಹಾಗೂ ಮಧ್ಯೆ ಚೆಲ್ಲಿಬಿಡುತ್ತದೆ. ಇಷ್ಟೇ ಅಲ್ಲದೆ, ನಿರ್ಮಾಣ ಕಾಮಗಾರಿಗಳು ನಡೆಯುವ ಸಂದರ್ಭ ಅಗೆದ ಮಣ್ಣನ್ನು ಹೆದ್ದಾರಿ ಬದಿ ತಂದು ಎಸೆಯಲಾಗುತ್ತದೆ. ಮೇಲ್ನೋಟಕ್ಕೆ ಕೆಂಪು ಮಣ್ಣು ಪ್ರಖರ ಬಿಸಿಲಿನಲ್ಲಿ ರಸ್ತೆ ಬದಿ ಸುಂದರವಾಗಿ ಕಾಣುತ್ತದೆ. ಮಳೆ ಬಂದ ಕೂಡಲೇ ಅದರ ಅಸಲಿ ಮುಖ ದರ್ಶನವಾಗುತ್ತದೆ.
ಸಾಮಾನ್ಯವಾಗಿ ರಸ್ತೆ ಪಕ್ಕ ಅಗೆಯುವುದು, ಪೈಪ್ ಲೈನ್, ಕೇಬಲ್ ಅಳವಡಿಸುವ ಕಾಮಗಾರಿ ನಡೆಸುವುದು ಇದ್ದೇ ಇರುತ್ತದೆ. ಅಷ್ಟೇ ಅಲ್ಲ, ರಸ್ತೆ ಪಕ್ಕದಲ್ಲಿರುವ ಜಾಗಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳೂ ನಡೆಯುತ್ತಿರುತ್ತವೆ. ಆದರೆ ಅಲ್ಲಿಂದ ಹೊರತೆಗೆದ ಮಣ್ಣನ್ನು ರಸ್ತೆ ಪಕ್ಕವೇ ಎಸೆದುಬಿಡುವುದರಿಂದ ಮಳೆ ಬಿದ್ದ ಸಂದರ್ಭ ಅದು ಅಂಟುಮಣ್ಣಾಗುತ್ತದೆ. ವಾಹನಗಳು ಮತ್ತು ಪಾದಚಾರಿಗಳಿಗೆ ಇದು ಸಿಂಹಸ್ವಪ್ನವಾಗಿಬಿಡುತ್ತದೆ. ಯಾರು ಅಗೆದರೋ ಅವರೇ ಹೊಣೆ ಎಂಬ ಮಾತು ಕಡತಗಳಲ್ಲಷ್ಟೇ ಉಳಿಯುತ್ತವೆ. ಒಂದು ಇಲಾಖೆ ಇನ್ನೊಂದನ್ನು ಹೊಣೆ ಮಾಡುವ ಪ್ರಕ್ರಿಯೆಗಳು ನಡೆಯುತ್ತವೆಯೇ ಹೊರತು, ಕೆಲಸವಾದ ಮೇಲೆ ನಾವಾಯಿತು, ನಮ್ಮ ಕೆಲಸವಾಯಿತು ಎಂದು ಎದ್ದು ಹೋದರೆ, ಮಳೆಗಾಲವಿಡೀ ಜನರು ಸಮಸ್ಯೆ ಅನುಭವಿಸಬೇಕಾಗುತ್ತದೆ.