ಅಧಿಕಾರಕ್ಕಾಗಿ ಕಚ್ಚಾಡುವ ಈ ಸನ್ನಿವೇಶದಲ್ಲಿ ಶಿಸ್ತುಬದ್ಧವಾಗಿ ಅಧಿಕಾರ ಹಸ್ತಾಂತರಿಸಿ ಕಾರ್ಯವೆಸಗುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಡಾ. ಡಿ. ವಿರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಮಾದರಿಯಾಗಿ ಕಾರ್ಯಕ್ರಮ ನಡೆಸುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡು ವಲಯದ ನೂತನ ಒಕ್ಕೂಟಗಳ ವಲಯಾಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಸಾಮೂಹಿಕ ಶ್ರೀಸತ್ಯ ನಾರಾಯಣ ಪೂಜಾ ಕಾರ್ಯಕ್ರಮ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಭಾನುವಾರ ನಡೆಯಿತು. ಈ ಸಂದರ್ಭ ನಳಿನ್ ಕುಮಾರ್ ಕಟೀಲ್ ಅವರು ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಶಿಸ್ತುಬದ್ದವಾಗಿ ತಮ್ಮ ಜವಬ್ದಾರಿಯನ್ನು ನೂತನ ಪದಾಧಿಕಾರಿಗಳಿಗೆ ಹಸ್ತಾಂತರಿಸುತ್ತಿರುವುದು ಅಭಿನಂದನೀಯ ಕಾರ್ಯ ಎಂದರು.
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಶಿಸ್ತಿಗೆ ಇನ್ನೊಂದು ಹೆಸರೆ ಶ್ರೀ.ಕ್ಷೇ.ಧ.ಗ್ರಾ.ಯೋಜನೆ,ಶಿಸ್ತು, ಪ್ರಾಮಾಣಿಕತೆ,ಭಕ್ತಿ ಹಾಗೂ ನಿಸ್ವಾರ್ಥ ಸೇವೆಯ ಮನಸ್ಸನ್ನು ಮೈಗೂಡಿಸಿದರೆ ವ್ಯಕ್ತಿಯ ಏಳಿಗೆಯು ಸಾಧ್ಯ ಎಂದು ನುಡಿದರು.
ಬಂಟ್ವಾಳ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಸಭಾಧ್ಯಕ್ಷತೆ ವಹಿಸಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ., ಬಂಟ್ವಾಳ ಭೂಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಜನಜಾಗೃತಿ ವೇದಿಕೆಯ ಅಧ್ಯಕ್ಷ ರೋನಾಲ್ಡ್ ಡಿಸೋಜ ಅಮ್ಟಾಡಿ, ಬಂಟ್ವಾಳ ಒಕ್ಕೂಟಗಳ ಕೇಂದ್ರ ಸಮಿತಿ ಅಧ್ಯಕ್ಷ ಸದಾನಂದ ಗೌಡ ನಾವೂರು, ಪ್ರಕಾಶ್ ಶೆಟ್ಟಿ ನುಚ್ಚ ಅಳದಂಗಡಿ ಅತಿಥಿಗಳಾಗಿ ಭಾಗವಹಿಸಿದ್ದರು.
ವಲಯದ ನೂತನ ಅಧ್ಯಕ್ಷ ಶೇಖರ ಸಾಮಾನಿ ಅವರಿಗೆ ನಿಕಟಪೂರ್ವ ಅಧ್ಯಕ್ಷ ಪುರುಷೋತ್ತಮ ಅವರು ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಿವಿಧ ಒಕ್ಕೂಟಗಳ ನೂತನ ಅಧ್ಯಕ್ಷರುಗಳಾದ ಶ್ರೀನಿವಾಸ ಪೂಜಾರಿ, ರಾಜೇಶ್ ಗೌಡ, ಯಶೋಧಾ, ಪ್ರಮೀಳಾ ಡಿ.,ಚೈತ್ರಾ, ರಘುನಾಥ, ವಿದ್ಯಾಶ್ರೀ,ರಾಮಚಂದ್ರ ವೇದಿಕೆಯಲ್ಲಿದ್ದರು. ಆಚಾರಿ ಪಲ್ಕೆ ಒಕ್ಕೂಟದ ಅಧ್ಯಕ್ಷ ರಾಜೇಶ್ ಸ್ವಾಗತಿಸಿದರು.ಮೂಡನಡುಗಡು ‘ಬಿ’ ವಲಯದ ಅಧ್ಯಕ್ಷ ಆನಂದ ವಂದಿಸಿದರು.ಮೇಲ್ವಿಚಾರಕ ರಮೇಶ್ ಎಸ್. ಕಾರ್ಯಕ್ರಮ ನಿರೂಪಿಸಿದರು.