ಪೊಳಲಿ ದೇವಸ್ಥಾನಕ್ಕೆ ಕೊಡಿಮರ ಸಮರ್ಪಣೆ ಸಂದರ್ಭ ತನ್ನ ವಿರುದ್ಧ ಅಪಪ್ರಚಾರ ಮಾಡಲಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಶುಕ್ರವಾರ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಮೊರೆ ಹೋಗಿ ಪ್ರಾರ್ಥನೆ ಸಲ್ಲಿಸಿದರು.
ದೇವಸ್ಥಾನದ ಸನ್ನಿಧಿಯಲ್ಲಿ ಅಪಪ್ರಚಾರದ ಕುರಿತಾಗಿ ಮನಸ್ಸಿನ ಭಾವನೆಯನ್ನು ನಿವೇದಿಸಿಕೊಂಡ ರೈ, ತನ್ನ ಬಗ್ಗೆ ಅಪಪ್ರಚಾರ ನಡೆಸಿದವರಿಗೆ ಸದ್ಭುದ್ದಿ ನೀಡಬೇಕು, ಮತ್ತು ಸತ್ಯ ಏನೆಂದು ಎಲ್ಲರಿಗೂ ತಿಳಿಯುವಂತೆ ಮಾಡಬೇಕೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ರೈ, ಪೊಳಲಿ ದೇವಸ್ಥಾನಕ್ಕೆ ಕೊಡಿಮರವನ್ನು ನೀಡಲು ಬಿಲ್ಲವ ಸಮುದಾಯ ನಿರ್ಧರಿಸಿದ ಬಳಿಕ ಪ್ರತೀ ಹಂತದಲ್ಲೂ ಅದಕ್ಕೆ ಪೂರಕವಾಗಿ ಸ್ಪಂದಿಸಿದ್ದೇನೆ, ಕ್ಷೇತ್ರದ ಭಕ್ತನಾಗಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷನಾಗಿ, ಅರಣ್ಯ ಸಚಿವನಾಗಿ ತನ್ನಿಂದ ಏನೆಲ್ಲಾ ಆಗಬೇಕಿತ್ತೋ ಆ ಎಲ್ಲಾ ನೆರವನ್ನು ನೀಡಿದ್ದೇನೆ, ಆದರೂ ಅಪಪ್ರಚಾರ ನಡೆಸಲಾಗಿದೆ ಎಂದು ವಿಷಾದಿಸಿದರು.
ರಾಜಕೀಯ ಕಾರಣಗಳಿಗಾಗಿ ತನ್ನ ವಿರುದ್ದ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ತನ್ನ ವಿರುದ್ದ ಜನತೆಗೆ ತಪ್ಪು ಮಾಹಿತಿ ನೀಡಲಾಗಿದೆ. ಕೊಡಿಮರದ ವಿಚಾರದಲ್ಲಿ ನಾನು ಚಿಕ್ಕ ತಪ್ಪನ್ನೂ ಮಾಡಿಲ್ಲ. ತಪ್ಪು ಮಾಡಿದವರಿಗೆ ದೇವರು ಶಿಕ್ಷೆ ನೀಡಲಿ ಎಂದರು.
ತನ್ನ ಅಧಿಕಾರವಧಿಯಲ್ಲಿ ಪೊಳಲಿ ಮಾತ್ರವಲ್ಲ ಜಿಲ್ಲೆ ಹಾಗೂ ಹೊರಜಿಲ್ಲೆಗಳ ಅನೇಕ ದೇವಸ್ಥಾನಗಳಿಗೆ ಕೊಡಿಮರ ಒದಗಿಸಲು ಹಾಗೂ ಹಲವು ವಿಚಾರಗಳಿಗೆ ಅರಣ್ಯ ಸಚಿವನ ನೆಲೆಯಲ್ಲಿ, ದೇವರ ಮೇಲಿನ ಶ್ರದ್ಧಾಭಕ್ತಿಯಿಂದ ನೆರವು ನೀಡುತ್ತಲೇ ಬಂದಿದ್ದೇನೆ, ಆದರೂ ಅಪಪ್ರಚಾರ ನಡೆದಿರುವುದು ಮನಸ್ಸಿಗೆ ನೋವುತಂದಿದೆ ಎಂದು ರೈ ಹೇಳಿದರು.
ಈ ಸಂದರ್ಭ ಪೊಳಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಅಮ್ಮುಂಜೆ ಗುತ್ತು ಡಾ.ಮಂಜಯ್ಯ ಶೆಟ್ಟಿ, ಮೊಕ್ತೇಸರರಾದ ಉಳಿಪ್ಪಾಡಿ ತಾರಾನಾಥ ಆಳ್ವ, ಪಿ.ಮಾಧವ ಭಟ್, ಜೀರ್ಣೋದ್ದಾರ ಸಮಿತಿ ಸದಸ್ಯರಾದ ಅರುಣ್ ಆಳ್ವ ಉಳಿಪ್ಪಾಡಿಗುತ್ತು , ಡಿ.ಚಂದ್ರಶೇಖರ ಭಂಡಾರಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಮಂಜುಳಾ ಮಾಧವ ಮಾವೆ, ಪ್ರಮುಖರಾದ ರಾಮಕೃಷ್ಣ ಆಳ್ವ, ಪದ್ಮನಾಭ ರೈ, ಸಂಜೀವ ಪೂಜಾರಿ, ಮಾಯಿಲಪ್ಪ ಸಾಲ್ಯಾನ್, ಬೇಬಿ ಕುಂದರ್, ಜಗದೀಶ ಕುಂದರ್, ಮಲ್ಲಿಕಾ ಶೆಟ್ಟಿ, ಪ್ರಶಾಂತ್ ಕುಲಾಲ್, ಜಯಂತಿ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.