ಬುಧವಾರ ರಾತ್ರಿಯಿಂದೀಚೆಗೆ ಸುರಿದ ಮಳೆಯ ಅಬ್ಬರಕ್ಕೆ ತಾಲೂಕಿನ ಹಲವೆಡೆಗಳಲ್ಲಿ ಗುಡ್ಡ ಕುಸಿತ ಉಂಟಾಗಿದೆ. ನೇತ್ರಾವತಿ ನದಿ ನೀರಿನ ಮಟ್ಟ 7 ಮೀಟರ್ ಗೆ ಏರಿಕೆಯಾಗಿದ್ದು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
ತುಂಬೆ ಗ್ರಾಮದಲ್ಲಿ ಗಿರಿಜ, ರಮ್ಲತ್, ವಿಟ್ಲ ಕಸ್ಬಾ ಗ್ರಾಮದ ಸರೋಜಿನಿ, ಸಜಿಪನಡು ಗ್ರಾಮದ ದೇರಾಜೆಎಂಬಲ್ಲಿ ಗುಡ್ಡ ಕುಸಿತ, ಕೆದಿಲ ಗ್ರಾಮದಲ್ಲಿ ಐಸಮ್ಮ ಎಂಬವರ ಪಕ್ಕಾಮನೆಗೆ ಹಾನಿ, ಕಡೇಶ್ವಾಲ್ಯ ಗ್ರಾಮದಲ್ಲಿ ರವಿ, ಹೊನ್ನಪ್ಪ ನಾಯ್ಕ, ಶಾಂತಾ, ವಿಶ್ವನಾಥ, ನೆಕ್ಕಿಲಾಡಿಯಲ್ಲಿ ನಟರಾಜ್ , ಕೊಗ್ಗಣ್ಣ ನಾಯ್ಕ, ಮಹಮ್ಮದ್ದ್ ಎಂಬವರ ಮನೆಗಳಿಗೆ ಗುಡ್ಡ ಕುಸಿತದಿಂದ ಹಾನಿಯಾಗಿದೆ. ಗ್ರಾಮಕರಣಿಕರ ಮೂಲಕ ನಷ್ಟದ ಅಂದಾಜನ್ನು ದಾಖಲಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.
ವಾಮದಪದವು ಅಜ್ಜಿಬೆಟ್ಟು ಗ್ರಾಮ ಕೆಮ್ಮಾರು ತಾರಬರಿ ರಸ್ತೆಯು ಜೂ. 13ರಂದು ರಾತ್ರಿ ಸುರಿದ ಭಾರಿ ಮಳೆಗೆ ಗುಡ್ಡ ಕುಸಿದು ಬೃಹತ್ ಪ್ರಮಾಣದಲ್ಲಿ ಮಣ್ಣು ರಸ್ತೆಗೆ ಬಿದ್ದು ರಸ್ತೆ ಸಂಪೂರ್ಣ ಮುಚ್ಚಿ ಹೋಗಿದೆ ಮತ್ತು ಹಲವು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಇದರಿಂದಾಗಿ ವಿದ್ಯುತ್ ಸರಬರಾಜು ಸಂಪರ್ಕ ಸ್ಥಗಿತಗೊಂಡಿದೆ. ವಾಹನ ಸಂಚಾರ ಅಡಚಣೆ ಆಗಿದೆ.
ಪಾದಾಚಾರಿಗಳು ಕೂಡ ನಡೆದುಕೊಂಡು ಹೋಗದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ತುಂಬಾ ನಷ್ಟ ಸಂಭವಿಸಿರುತ್ತದೆ. ಈ ಸಂದರ್ಭ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಗುತ್ತು ಮೆಸ್ಕಾಂ ಅದಿಕಾರಿಗಳನ್ನು ಸಂಪರ್ಕಿಸಿ ವಿದ್ಯುತ್ ಸಂಪರ್ಕ ಪುನರ್ ಸ್ಥಾಪಿಸುವಲ್ಲಿ ಹೆಚ್ಚುವರಿ ಸಿಬಂದಿಗಳನ್ನು ನೇಮಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ಬಂಟ್ವಾಳ ಕ್ಷೇತ್ರ ಬಿಜೆಪಿ ಉಪಾಧ್ಯಕ್ಷ ವಿಜಯ ರೈ ಆಲದಪದವು, ವಲಯ ಅಧ್ಯಕ್ಷ ಕಾಪು ಜಯರಾಮ ಶೆಟ್ಟಿ, ಪುರುಷೋತ್ತಮ ಶೆಟ್ಟಿ , ಬಾರೆಕಿನಡೆ , ಬಿ.ಜೆ.ಪಿ ಪ್ರಮುಖರಾದ ಯಶೋಧರ್ ಜೈನ್, ಸಂತೋಷ್ ಕುಲಾಲ್ ,ಬೂತ್ ಸಮಿತಿ ಅಧ್ಯಕ್ಷ ಉಮೇಶ್ ಶೆಟ್ಟಿ , ಸ್ಥಳಕ್ಕೆ ಭೇಟಿ ರಸ್ತೆಗೆ ಬಿದ್ದ ಮಣ್ಣು ತೆರವು ಮಾಡುವಲ್ಲಿ ಕ್ರಮಕ್ಕೆ ಮುಂದಾಗಿದ್ದಾರೆ.