ಬಂಟ್ವಾಳ ತಾಲೂಕಿನ ಅಮ್ಟಾಡಿ ಹಾಗೂ ಇರ್ವತ್ತೂರು ಗ್ರಾ.ಪಂಗಳಲ್ಲಿ ತೆರವಾಗಿದ್ದ ತಲಾ ಒಂದೊಂದು ಸ್ಥಾನಗಳಿಗೆ ಗುರುವಾರ ಶಾಂತಿಯುತವಾಗಿ ಉಪಚುನಾವಣೆ ನಡೆಯಿತು.
ಅಮ್ಟಾಡಿ ಪಂಚಾಯಿತಿ ಸದಸ್ಯೆ ಚಂದ್ರಾವತಿ ಬಿ. ಭಂಡಾರಿ ಅವರ ನಿಧನದಿಂದ ತೆರವಾಗಿದ್ದ ಒಂದು ಸ್ಥಾನಕ್ಕೆ ಬಂಟ್ವಾಳದ ಎಸ್‌ವಿಎಸ್ ಟೆಂಪಲ್ ಶಾಲೆಯಲ್ಲಿ ಉಪಚುನಾವಣೆ ನಡೆಯಿತು. ಸದಸ್ಯೆಯಾಗಿದ್ದ ಚಂದ್ರಾವತಿಯವರು ಕಳೆದ ಕೆಲ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಹಿನ್ನಲೆಯಲ್ಲಿ ಈ ಸ್ಥಾನ ತೆರವಾಗಿತ್ತು. ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸುರೇಂದ್ರ ಪೂಜಾರಿ, ಹಾಗೂ ಸಿಪಿಐ ಬೆಂಬಲಿತ ಅಭ್ಯರ್ಥಿಯಾಗಿ ಮೃತ ಚಂದ್ರಾವತಿಯವರ ಪತಿ ಬಾಬು ಭಂಡಾರಿ ಸ್ಪರ್ಧಿಸಿದ್ದಾರೆ. ಒಟ್ಟು 1009 ಮತದಾರರ ಪೈಕಿ 323 ಪುರಷರು ಹಾಗೂ 336 ಮಹಿಳೆಯರು ಮತಚಲಾಯಿಸಿದ್ದು ಶೇ. 65ಮತದಾನವಾಗಿದೆ.
ಇರ್ವತ್ತೂರು ಗ್ರಾಮ ಪಂಚಾಯತ್‌ನ ಮೂಡುಪಡುಕೋಡಿ 1ನೇ ಕ್ಷೇತ್ರದ ತೆರವಾದ ಒಂದು ಸ್ಥಾನಕ್ಕೆ ಗುರುವಾರ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸುಧೀಂದ್ರ ಶೆಟ್ಟಿ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಜನಾರ್ದನ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಹಿಂದಿನ ಸದಸ್ಯ ಸುಂದರ ಶೆಟ್ಟಿ ಪಂಚಾಯಿತಿಯ ಸಾಮಾನ್ಯ ಸಭೆಗೆ ನಿರಂತರವಾಗಿ ಗೈರು ಹಾಜರಾದ ಹಿನ್ನಲೆಯಲ್ಲಿ ಅವರ ಸದಸ್ಯತ್ವ ರದ್ದಾಗಿತ್ತು. ವಾರ್ಡಿನ
994 ಮತದಾರರ ಪೈಕಿ 315 ಮಹಿಳೆಯರು ಹಾಗೂ ೩೮೭ ಪುರುಷರು ಮತಚಲಾಯಿಸಿದ್ದು ಶೇ. 70 ಮತದಾನವಾಗಿದೆ. ಎರಡೂ ಸ್ಥಾನಗಳ ಮತ ಎಣಿಕೆ ಜೂ. 17ರಂದು ಭಾನುವಾರ ಬಿ.ಸಿ.ರೋಡಿನ ಮಿನಿ ವಿಧಾನಸೌದದಲ್ಲಿ ನಡೆಯಲಿದೆ.