ಬಂಟ್ವಾಳ ಪುರಸಭೆ ವ್ಯಾಪ್ತಿಯ ಹಲವೆಡೆ ಪ್ಲಾಸ್ಟಿಕ್ ಬಳಕೆಯ ನಿಷೇಧವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳ ತಂಡ ಅಂಗಡಿ ಮಳಿಗೆಗಳಿಗೆ ಭೇಟಿ ನೀಡಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಯಿತು.
ಬುಧವಾರ ಇಲ್ಲಿನ ಅಧಿಕಾರಿಗಳ ತಂಡ ಪುರಸಭಾ ವ್ಯಾಪ್ತಿಯ ಅಂಗಡಿ, ಮಳಿಗೆಗಳಿಗೆ ದಾಳಿ ನಡೆಸಿ, ನಿಷೇತ ಪ್ಲಾಸ್ಟಿಕ್‌ಅನ್ನು ವಶಕ್ಕೆ ಪಡೆದು ಅಂಗಡಿ ಮಾಲಕರಿಂದ ದಂಡ ವಸೂಲಾತಿ ಮಾಡಿತು.
ಪುರಸಭೆಯ ಮುಖ್ಯಾಕಾರಿ ರೇಖಾ ಜೆ ಶೆಟ್ಟಿ, ಸಮುದಾಯ ವ್ಯವಹಾರಗಳ ಅಧಿಕಾರಿ ಮತ್ತಡಿ, ಹಿರಿಯ ಆರೋಗ್ಯ ನಿರೀಕ್ಷಕ ರತ್ನಪ್ರಸಾದ್.ಪಿ, ಮತ್ತು ಸಿಬ್ಬಂದಿಗಳಾದ ಶ್ರೀನಿವಾಸ್ ಹಾಗೂ ಇಕ್ಬಾಲ್ ಪಾಲ್ಗೊಂಡಿದ್ದ ದಾಳಿಯಲ್ಲಿ ಸುಮಾರು 40 ಕೆ.ಜಿ. ನಿಷೇತ ಪ್ಲಾಸ್ಟಿಕ್ ಅನ್ನು ವಶಪಡಿಸಲಾಗಿದ್ದು, ನಾಲ್ಕು ಸಾವಿರ ರೂ. ದಂಡ ವಿಧಿಸಲಾಯಿತು. ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕರ್ನಾಟಕ ಸರಕಾರದ ಆದೇಶದಂತೆ, ಪ್ಲಾಸ್ಟಿಕ್ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಉದ್ಯಮದಾರರಿಗೆ ಮತ್ತು ಸಾರ್ವಜನಿಕರಿಗೆ ಸಾಕಷ್ಟು ಅರಿವು ಮೂಡಿಸುವ ನಿಟ್ಟಿನಲ್ಲಿ ಇಂಥ ದಾಳಿಯನ್ನು ಸಂಘಟಿಸಲಾಗಿದ್ದು, ಮುಂದಿನ ದಿನಗಳಲ್ಲಿಯೂ ಕಟ್ಟುನಿಟ್ಟಾಗಿ ಸರಕಾರದ ಪ್ಲಾಸ್ಟಿಕ್ ನಿಷೇಧ ಕಾಯಿದೆಯನ್ನು ಅನುಷ್ಠಾನಗೊಳಿಸುವುದು ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.