ಬಂಟ್ವಾಳ

ಶಾಂತಿ, ನೆಮ್ಮದಿಯ ಬಂಟ್ವಾಳ ನಿರ್ಮಾಣ ನಮ್ಮ ಧ್ಯೇಯ: ರಾಜೇಶ್ ನಾಯ್ಕ್ ಉಳಿಪ್ಪಾಡಿ

www.bantwalnews.com

ಕಳೆದ ಎರಡು ದಿನಗಳಿಂದ ಗೊಂದಲ ಸೃಷ್ಟಿಗೆ ಪ್ರಯತ್ನಗಳು ನಡೆದಿವೆ. ಆದರೆ ಯಾವುದೇ ಕ್ರಿಮಿನಲ್ ಚಟುವಟಿಕೆಗಳಿಗೆ ನಾವು ಆಸ್ಪದ ನೀಡುವುದಿಲ್ಲ. ಶಾಂತಿ, ನೆಮ್ಮದಿಯ ತಾಣವನ್ನಾಗಿ ಬಂಟ್ವಾಳವನ್ನು ಬದಲಾಯಿಸುವುದು ನಮ್ಮ ಧ್ಯೇಯ.

ಹೀಗೆಂದು ಹೇಳಿದವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು. ಬ್ರಹ್ಮರಕೂಟ್ಲುವಿನಲ್ಲಿರುವ ಬಂಟವಾಳ ಬಂಟರ ಭವನದಲ್ಲಿ ಮಂಗಳವಾರ ನಡೆದ ಪೇಜ್ ಪ್ರಮುಖರು ಮತ್ತು ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ರಾಜೇಶ್ ನಾಯ್ಕ್ ಹೇಳಿದ್ದಿಷ್ಟು.

  • ನನಗೆ ಟಿಕೆಟ್ ಕೊಡಿ ಎಂದು ಹೇಳಿಲ್ಲ. ಕ್ಷೇತ್ರದ ಕಾರ್ಯಕರ್ತರ ಒತ್ತಾಸೆಯಂತೆ ರಾಜ್ಯದ ಹಿರಿಯರು ನನಗೆ ಟಿಕೆಟ್ ಕೊಟ್ಟಿದ್ದರು.
  • ಬಂಟ್ವಾಳದಲ್ಲಿ ಬಿಜೆಪಿ ವಿರೋಧಿಸುವ ಎಲ್ಲ ಶಕ್ತಿಗಳು ಒಟ್ಟು ಸೇರಿದ್ದವು. ಆಗಲೇ ನನಗೆ ಈ ಬಾರಿ ಗೆಲುವು ನಿಶ್ಚಿತ ಎಂದು ಗೊತ್ತಾಯಿತು.
  • 15 ಕಿ.ಮೀ. ದೂರದುದ್ದಕ್ಕೂ ನಾಮಪತ್ರ ಸಲ್ಲಿಕೆ ಸಂದರ್ಭ ಬಂದಿದ್ದ ಕಾರ್ಯಕರ್ತರ ಬೆಂಬಲ ಬಿಜೆಪಿಗಿರುವುದು ದೊಡ್ಡ ಶಕ್ತಿ

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಜಿಲ್ಲೆಗಳ ಬಿಜೆಪಿ ಶಾಸಕರು ಅಭಿವೃದ್ದಿ, ಉತ್ಥಾನ ಮತ್ತು ಸಾಮರಸ್ಯಕ್ಕೆ ಒತ್ತುನೀಡಲಿದ್ದಾರೆ ಎಂದರು. ನಳಿನ್ ಕುಮಾರ್ ಭಾಷಣದಲ್ಲಿ ಹೇಳಿದ್ದು ಹೀಗೆ.

  • ಪೇಜ್ ಪ್ರಮುಖರು ತಮ್ಮಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
  • ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರ ಡೈವಸ್೯ ಹಂತಕ್ಕೆ ಬಂದಿದ್ದು, ಮೂರು ತಿಂಗಳ ಬಳಿಕಬಿಜೆಪಿ ಅಧಿಕಾರಕ್ಕೆ ಬರಲಿದೆ.
  • ಪ್ರದಾನಿ ನರೇಂದ್ರ ಮೋದಿಯವರು 15 ಸಾವಿರ ಕೋಟಿ ರೂ .ಅನುದಾನವನ್ನು ದ.ಕ. ಜಿಲ್ಲೆಗೆ ನೀಡಿದ್ದಾರೆ. ಅದರಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ 1375 ಕೋ.ರೂ.ಅನುದಾನ ಸೇರಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಿಜೆಪಿ ಶಾಸಕರು ಒಟ್ಟಾಗಿ ಜಿಲ್ಲೆಗಳ ಅಭಿವೃದ್ಧಿ ದೃಷ್ಟಿಯಿಂದ ಒಟ್ಟಾಗಿ ದುಡಿಯುತ್ತೇವೆ. ಹೆದ್ದಾರಿ, ನೇತ್ರಾವತಿ, ಡೀಮ್ಡ್ ಫಾರೆಸ್ಟ್, ಅಡಕೆ, ರಬ್ಬರ್ ಬೆಳೆಗಾರರಸಮಸ್ಯೆ ಸಹಿತ ಹಲವಾರು ಯೋಜನೆಗಳು, ಜನೋಪಯೋಗಿ ವಿಚಾರಗಳ ಕುರಿತು ಸ್ಪಷ್ಟ ಕಾರ್ಯಸೂಚಿಯನ್ನು ಹಮ್ಮಿಕೊಳ್ಳುತ್ತೇವೆ ಎಂದರು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್. ಹಿಂದುತ್ವದ ಆಧಾರದಲ್ಲಿ ಬಿಜೆಪಿ ಗೆದ್ದಿದೆ ಎಂದ ಅವರು,  ನೆಮ್ಮದಿಯ ವಾತಾವರಣ ಸೃಷ್ಟಿಗೆ ಕಾರ್ಯಕರ್ತರು ಪರಿಶ್ರಮ ಬೇಕು ಎಂದರು.

ವಿಧಾನಪರಿಷತ್ತು ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ,  ಪಾಕಿಸ್ತಾನದ ಉಗ್ರಗಾಮಿ ಮೋದಿ ವಿರುದ್ಧ ಮಾತನಾಡಿದರೆ, ಅದನ್ನು ಖಂಡಿಸುವ ಸೌಜನ್ಯ ಕಾಂಗ್ರೆಸ್ ಗಿಲ್ಲ. ಮೋದಿ ಟೀಕಿಸುವುದಷ್ಟೇ ಕಾಂಗ್ರೆಸ್ ಗೆ ಗೊತ್ತು ಎಂದರು.

ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಬಿಜೆಪಿ ನಾಯಕ ಪ್ರತಾಪ್ ಸಿಂಹ ನಾಯಕ್, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಪುತ್ತೂರು ಶಾಸಕ ಸಂಜೀವ ಮಠಂದೂರು, ಸುಳ್ಯ ಶಾಸಕ ಅಂಗಾರ, ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಮಾತನಾಡಿದರು.

ಮಂಗಳೂರು ಉತ್ತರ ಶಾಸಕ ಡಾ. ವೈ.ಭರತ್ ಶೆಟ್ಟಿ, ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಕಾಸರಗೋಡು ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಸುಮಿತ್ ರಾಜ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ಪೈ, ಜಿಲ್ಲಾ ಎಸ್.ಸಿ ಮೋರ್ಚಾ ಅಧ್ಯಕ್ಷ ದಿನೇಶ್ ಅಮ್ಟೂರು, ಪ್ರಮುಖರಾದ ಕಮಲಾಕ್ಷಿ ಪೂಜಾರಿ, ಧನಲಕ್ಷ್ಮೀ, ರವೀಂದ್ರ ಕಂಬಳಿ, ಚಂದ್ರಶೇಖರ ಉಚ್ಚಿಲ, ಸತೀಶ ಕುಂಪಲ, ಸುರೇಶ ಕಲಮರಡ್ಕ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಮುಂಬಯಿಯ ಪ್ರಮುಖ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು, ವೈದ್ಯ ಡಾ. ಪ್ರಸಾದ್ ಭಂಡಾರಿ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ ಮತ್ತು ಕೆ.ಪದ್ಮನಾಭ ಕೊಟ್ಟಾರಿ, ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ.ಭಟ್ ಉಪಸ್ಥಿತರಿದ್ದರು.

ಗಂಗಾಧರ ಗೌಡ ವಂದೇ ಮಾತರಂ ಹಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಬಂಟ್ವಾಳ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ, ಬಿಜೆಪಿ ಬಂಟ್ವಾಳದಲ್ಲಿ ಆಯ್ಕೆಯಾದುದನ್ನು ಸಹಿಸಲಾರದ ಕೆಲ ಶಕ್ತಿಗಳು ತೊಂದರೆ ನೀಡುತ್ತಿದ್ದು, ಇದಕ್ಕೆ ಕಾನೂನಿನ ಮೂಲಕವೇ ಉತ್ತರ ಕೊಡುತ್ತೇವೆ ಎಂದರು.

ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು. ಮತ್ತೋರ್ವ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ ವಂದಿಸಿದರು.

 

 

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ