ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜೂನ್ 12ರಂದು ಮಂಗಳವಾರ ಬ್ರಹ್ಮರಕೂಟ್ಲುವಿನಲ್ಲಿರುವ ಬಂಟವಾಳ ಬಂಟರ ಭವನದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವು ನಡೆಯಲಿದ್ದು, ರಾಜ್ಯಮಟ್ಟದ ನಾಯಕರು ಭಾಗಿಯಾಗಲಿದ್ದಾರೆ.
ಈ ವಿಷಯವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಶನಿವಾರ ಬಿ.ಸಿ.ರೋಡಿನ ಪಕ್ಷ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಬಿಜೆಪಿಯಿಂದ ಆಯ್ಕೆಗೊಂಡ ಕರಾವಳಿಯ ಎಲ್ಲ ಶಾಸಕರು, ಪಕ್ಷ ಪ್ರಮುಖರಾದ ಸಿ.ಟಿ.ರವಿ ಮೊದಲಾದವರು ಭಾಗವಹಿಸುವರು ಎಂದರು. ಸುಮಾರು 5ರಿಂದ 6 ಸಾವಿರ ಪೇಜ್ ಪ್ರಮುಖರು ಇದರಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಪಕ್ಷದ ಗೆಲುವಿಗೆ ಕಾರ್ಯಕರ್ತರ ಕೊಡುಗೆಯನ್ನು ಗಮನಿಸಿ ಈ ಬೃಹತ್ ಸಮಾರಂಭವನ್ನು ಆಯೋಜಿಸಲಾಗಿದ್ದು, ಕಾರ್ಯಕರ್ತರನ್ನು ಈ ಸಂದರ್ಭ ಗೌರವಿಸಲಾಗುವುದು ಎಂದು ಅವರು ಹೇಳಿದರು.
22ರಂದು ಶಾಸಕರ ಕಚೇರಿ ಆರಂಭ:
ಬಿ.ಸಿ.ರೋಡಿನ ಸಾಮರ್ಥ್ಯ ಸೌಧದಲ್ಲಿ ಜೂನ್ 22ರಂದು ಶಾಸಕರ ಕಚೇರಿ ಕಾರ್ಯಾರಂಭವಾಗಲಿದೆ. ಈಗ ನೀತಿಸಂಹಿತೆ ಜಾರಿಯಲ್ಲಿದ್ದ ಕಾರಣ ಅಧಿಕಾರಿಗಳ ಮಟ್ಟದ ಸಭೆಗಳನ್ನು ಏರ್ಪಡಿಸದೇ ಇದ್ದರೂ ಕ್ಷೇತ್ರಾದ್ಯಂತ ಸಂಚರಿಸಿ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ ಎಂದು ರಾಜೇಶ್ ನಾಯ್ಕ್ ಹೇಳಿದರು.
ಗೆಲುವು ಆಕಸ್ಮಿಕವಲ್ಲ:
ಈ ಸಂದರ್ಭ ಮಾತನಾಡಿದ ಪಕ್ಷದ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ, ರಾಜೇಶ್ ನಾಯ್ಕ್ ಅವರ ಗೆಲುವು ಆಕಸ್ಮಿಕವೇನೂ ಅಲ್ಲ. ಗ್ರಾಮಮಟ್ಟದಲ್ಲಿ ಅವರು ಕಳೆದ ಐದು ವರ್ಷಗಳಿಂದ ಮಾಡಿದ ಕೆಲಸ ಹಾಗೂ ಯಾವುದೇ ಪದಾಧಿಕಾರಿ ಅಲ್ಲದಿದ್ದರೂ ಪಕ್ಷದಲ್ಲಿ ದುಡಿದ ಹಿನ್ನೆಲೆಯಲ್ಲಿ ಬಿಜೆಪಿಗೆ ಗೆಲುವು ಸಾಧ್ಯವಾಯಿತು. 12ರಂದು ಕ್ಷೇತ್ರದ ಎಲ್ಲ 246 ಬೂತ್ ಗಳ ಪ್ರಮುಖರು, ಪೇಜ್ ಪ್ರಮುಖರು ಭಾಗವಹಿಸಲಿದ್ದು, ಮಧ್ಯಾಹ್ನದ ಬಳಿಕ ಪಟ್ಲ ಸತೀಶ ಶೆಟ್ಟಿ ನೇತೃತ್ವದಲ್ಲಿ ಯಕ್ಷ ಗಾನ ವೈಭವ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ.ಭಟ್, ಜಿಪಂ ಸದಸ್ಯ ತುಂಗಪ್ಪ ಬಂಗೇರ, ಜಿಲ್ಲಾ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ್, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ, ಮುಖಂಡರಾದ ದಿನೇಶ್ ಅಮ್ಟೂರು, ರಮಾನಾಥ ರಾಯಿ, ರಾಜಾರಾಮ ನಾಯಕ್, ಸುದರ್ಶನ ಬಜ ಇದ್ದರು.