ವಿಧಾನಪರಿಷತ್ತು ಚುನಾವಣೆ ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ಇಡೀ ದಿನ ಮಳೆ ಸುರಿದು ವಾತಾವರಣವನ್ನು ಥಂಡಿಯಾಗಿಸಿತು. ಬೆಳಗ್ಗೆ ಕೆಲಹೊತ್ತು ಬಿಸಿಲು ಕಂಡುಬಂದದ್ದು ಬಿಟ್ಟರೆ ಇಡೀ ಬಂಟ್ವಾಳ ತಾಲೂಕಿನಲ್ಲಿ ಮಳೆಯದ್ದೇ ಕಾರುಬಾರು.
ತಾಲೂಕು ಆಡಳಿತ ಮುನ್ನೆಚ್ಚರಿಕೆ ವಹಿಸಿದ್ದು, ಎಲ್ಲಾ ಅಧಿಕಾರಿಗಳನ್ನು ಕರ್ತವ್ಯದ ಕೇಂದ್ರ ಸ್ಥಾನದಲ್ಲಿರುವಂತೆ ಸೂಚಿಸಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮಳೆ ನೀರು ಸುಗಮವಾಗಿ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಮಾಡುವಂತೆ ಸೂಚನೆಯನ್ನು ನೀಡಲಾಗಿದೆ. ನದಿ ತಟಗಳಲ್ಲಿ ತೀವ್ರ ಮುನ್ನೆಚ್ಚರಿಕೆ ವಹಿಸಲಾಗಿದ್ದು ರಬ್ಬರ ಬೋಟ್ ಗಳನ್ನು ಸಿದ್ದಪಡಿಸಲಾಗಿದೆ. ಈಜುಪಟುಗಳನ್ನು ಗುರುತಿಸಿ ಸಂಪರ್ಕದಲ್ಲಿರಿಸಿಕೊಳ್ಳಲಾಗಿದೆ. ಹಳೆಯ ಮರಗಳು ಹಾಗೂ ಕುಸಿಯುವ ಹಂತದ ಗುಡ್ಡೆಗಳ ಬಗ್ಗೆ ವಿಶೇಷ ಗಮನ ಇರಿಸಲಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ವೈ.ರವಿ ತಿಳಿಸಿದ್ದಾರೆ.
ಸಜಿಪಪಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿಲ ಇಡಿಪಡ್ಪು ಎಂಬಲ್ಲಿ ಕಿರು ನೀರಾವರಿ ಯೋಜನೆ ಕೊಳವೆ ಬಾವಿಯ ಮತ್ತು ಪಂಪ್ ಹೌಸ್ ಮುಳುಗಿದೆ.
ಮಳೆಯಿಂದ ಏನೇನು ಅನಾಹುತಗಳಾದವು ಇಲ್ಲಿದೆ ವಿವರ.
- ತುಂಬೆ ವೆಂಟೆಡ್ ಡ್ಯಾಂನಲ್ಲಿ 6 ಮೀ ನಷ್ಟು ಎತ್ತರದ ನೀರನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರನ್ನು ಹೊರ ಬಿಡಲು ಡ್ಯಾಂನ ನಾಲ್ಕು ಬಾಗಿಲುಗಳನ್ನು ತೆರೆಯಲಾಗಿದೆ.
- ಸಜಿಪಪಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿಲ ಇಡಿಪಡ್ಪು ಎಂಬಲ್ಲಿ ಸಾರ್ವಜನಿಕ ಕುಡಿಯುವ ಕಿರು ನೀರಾವರಿ ಯೋಜನೆ ಕೊಳವೆ ಬಾವಿಯ ಮತ್ತು ಪಂಪ್ ಹೌಸ್ ಮುಳುಗಿದ್ದು, ಗ್ರಾಮದ ಜನರಿಗೆ ಕುಡಿಯಲು ನೀರಿಲ್ಲ ಎನ್ನುವ ಸ್ಥಿತಿ ನಿರ್ಮಾಣಗೊಂಡಿದೆ.
- ವಿಟ್ಲ ಕಸ್ಬಾ ಗ್ರಾಮದ ಪಳಿಕೆ ಅನ್ನಮೂಲೆ ಹರೀಶ್ ಪೂಜಾರಿಯವರ ಆವರಣ ಗೋಡೆಯು ನಿನ್ನೆ ರಾತ್ರಿ ಸುರಿದ ಮಳೆಗೆ ಜರಿದು ಹತ್ತಿರದ ಮನೆಗೆ ಬಿದ್ದು ಹಾನಿಯಾಗಿದೆ.
- ಬಿ. ಸಿ. ರೋಡ್ ಮತ್ತು ಪೊಳಲಿ ಮಧ್ಯೆ ಕಲ್ಲಗುಡ್ಡೆಯ ಡೋಮಿನಿಕ್ ಶಾಲೆಯ ಎದುರು ರಸ್ತೆ ಬದಿಯಲ್ಲಿದ್ದ ಬೃಹತ್ ಪುನರ್‌ಪುಳಿ(ಅಂಡಿ ಪುನರ್) ಮರವೊಂದು ಜೂನ್ 7ರಂದು ರಾತ್ರಿ ಕುಸಿದು ಬಿದ್ದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.
- ಕೈಕಂಬದಲ್ಲಿ ಮರವೊಂದು ಗೂಡಂಗಡಿಯೊಂದರ ಮೇಲೆ ಬಿದ್ದು ಹಾನಿ ಸಂಭವಿಸಿದೆ. ಮಾಣಿಲ ಗ್ರಾಮದಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ. ಇಲ್ಲಿನ ಭಾಗೀರಥಿ, ಐತಕೊರಗ, ಕೃಷ್ಣ ನಾಯ್ಕ ಎಂಬವರ ಮನೆಗಳಿಗೆ ಹಾನಿಯಾಗಿವೆ ಎಂದು ಕಂದಾಯ ಇಲಾಖೆ ಕಚೇರಿ ಮಾಹಿತಿ ನೀಡಿದೆ.