ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾಕೇಂದ್ರ ಅಬ್ಬೆಯಮಜಲು ನರಿಕೊಂಬು ಸಹಯೋಗದಲ್ಲಿ ಪೊಳಲಿ ವೇದಮೂರ್ತಿ ಅನಂತ ಭಟ್ ರಚಿಸಿದ ಕನ್ನಡ ಕೃತಿ ಗೀತಾ ಷಟ್ಪದಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಮೊಗರ್ನಾಡಿನ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಪ್ರಹ್ಲಾದ ಮಂಟಪದಲ್ಲಿ ನಡೆದ ಕಾರ್ಯಕ್ರಮಕ್ಕೆ ಶಾರದಾ ಪ್ರೌಢಶಾಲೆಯ ಸಂಚಾಲಕ ಜನಾರ್ದನ ವಾಸುದೇವ ಭಟ್ ದೀಪ ಪ್ರಜ್ವಲನಗೊಳಿಸಿ ಚಾಲನೆ ನೀಡಿದರು.
ಪುಸ್ತಕ ಬಿಡುಗಡೆಗೊಳಿಸಿದ ಭಾರತ ಸಂಸ್ಕೃತಿ ಪ್ರತಿಷ್ಠಾನದ ಕುಲಪತಿ ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಭಗವದ್ಗೀತೆಯ ಸಾರವನ್ನು ಕನ್ನಡ ಭಾಷೆಯಲ್ಲಿ ಷಟ್ಪದಿಯ ರೂಪದಲ್ಲಿ ಪ್ರಕಟಗೊಳಿಸಿರುವುದು ಸಂತೋಷದ ವಿಷಯ ಎಂದರು
ಮುಖ್ಯ ಅತಿಥಿಯಾಗಿ ಹಂಪಿ ಕನ್ನಡ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎ.ವಿ.ನಾವಡ ಮಾತನಾಡಿದರು. ಕೃತಿಕಾರ, ನಿವೃತ್ತ ಕನ್ನಡ ಉಪನ್ಯಾಸಕ ಪೊಳಲಿ ವೇದಮೂರ್ತಿ ಅನಂತ ಭಟ್ ಕೃತಿ ರಚನೆಯ ಉದ್ದೇಶದ ಕುರಿತು ಮಾಹಿತಿ ನೀಡಿದರು.
ಕಸಾಪ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ತಾಲೂಕು ಅಧ್ಯಕ್ಷ ಕೆ. ಮೋಹನ ರಾವ್, ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾಕೇಂದ್ರದ ಕೃಷ್ಣರಾಜ ಭಟ್ ಕರ್ಬೆಟ್ಟು, ಡಾ. ಸುಬ್ರಹ್ಮಣ್ಯ ಭಟ್, ಯತೀಶ ಶೆಟ್ಟಿ, ವೆಂಕಟೇಶ ರಾವ್, ಪ್ರಮುಖರಾದ ನಿತ್ಯಾನಂದ ಕಾರಂತ, ಜನಾರ್ದನ ಹಂದೆ ಉಪಸ್ಥಿತರಿದ್ದರು.
ಇದೇ ಸಂದರ್ಭ ಎಸ್.ಎಸ್.ಎಲ್.ಸಿ. ಸಾಧಕರಾದ ವಿಧಾತ್ರಿ ಸೋಮಯಾಜಿ, ಮಹಿಕಾ ಕೆ.ಎಸ್, ದೀಪಿಕಾ, ಪಲ್ಲವಿ, ನವೀನ್ ಚಂದ್ರ, ವಿಶ್ವಾಸ್, ಭರತ್ ಮತ್ತು ನಯನ ಅವರನ್ನು ಗೌರವಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕರ್ಬೆಟ್ಟು ಕೃಷ್ಣರಾಜ ಭಟ್ ಕಾರ್ಯಕ್ರಮ ನಿರೂಪಿಸಿದರು.