www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ರೈತರ ಸಾಲ ಮನ್ನಾ ವಿಚಾರದಲ್ಲಿ ಅನರ್ಹರು ದುರುಪಯೋಗ ಮಾಡಬಾರದೆಂಬ ಕಾರಣದಿಂದ ಮಾಡಿದ ಶರ್ತದಲ್ಲಿ ಜನಪ್ರತಿನಿಧಿಗಳನ್ನು ಸೇರಿಸಿರುವುದು ಅವೈಜ್ಞಾನಿಕವಾದುದು. ಶರ್ತದಲ್ಲಿ ಚುನಾಯಿತ ಪ್ರತಿನಿಧಿಗಳನ್ನು ತೆಗೆದು ಆದಾಯ ಮಿತಿಯನ್ನು ನಿಗದಿ ಪಡಿಸಬೇಕು ಎಂದು ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಒತ್ತಾಯಿಸಿದ್ದಾರೆ.
ಮೀಸಲಾತಿ ಆಧಾರದಲ್ಲಿ ಸ್ಪರ್ದಿಸಿ ಚುನಾಯಿತರಾಗಿರುವವರಲ್ಲಿ ಬಡ ವರ್ಗದವರೇ ಹೆಚ್ಚಾಗಿದ್ದು, ಸಾಮಾನ್ಯ ವರ್ಗದವರು ಕೃಷಿ ಕುಟುಂಬಕ್ಕೆ ಸೇರಿದವೇ ಆಗಿದ್ದಾರೆ ಎಂದು ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ಶುಕ್ರವಾರ ನಡೆಸಿ ಹೇಳಿದರು.
ಸಮಗ್ರ ಮಾಹಿತಿಯನ್ನು ಈಗಾಗಲೇ ಜಿಲ್ಲಾಧಿಕಾರಿಗಳಿಗೆ, ಮುಖ್ಯಮಂತ್ರಿಗಳಿಗೆ ಹಾಗೂ ಉಪಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳು ಮುಂದಿನ ಆದೇಶದಲ್ಲಿ ಸರಿ ಪಡಿಸದಿದ್ದಲ್ಲಿ ಚುನಾಯಿತ ಜನಪ್ರತಿನಿಧಿಗಳನ್ನು ಸೇರಿಸಿ ಒಕ್ಕೂಟದ ಮೂಲಕ ಹೋರಾಟದ ರೂಪುರೇಶೆಗಳನ್ನು ಸಿದ್ದಪಡಿಸಬೇಕಾಗುತ್ತದೆ. ಸಾಮೂಹಿಕ ರಾಜೀನಾಮೆ ಅಥವಾ ನ್ಯಾಯಾಲಯದ ಮೂಲಕ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಒಕ್ಕೂಟದ ಬಂಟ್ವಾಳ ತಾಲೂಕು ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಉಪಾಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಉಪಸ್ಥಿತರಿದ್ದರು.
ಸುಭಾಶ್ಚಂದ್ರ ಶೆಟ್ಟಿ ಹೇಳಿದ್ದಿಷ್ಟು.
ಸಂಬಳ ಮತ್ತು ಬತ್ಯೆ ಪಡೆಯುವ ಶಾಸನ ಸಭೆಯ ಜನಪ್ರತಿನಿಧಿಗಳಿಗೆ ಹಾಗೂ ಆದಾಯ ತೆರಿಗೆ ಕಟ್ಟುವ ಸ್ಥಳೀಯ ಆಡಳಿತ ಸಂಸ್ಥೆಗಳ ಪ್ರತಿನಿಧಿಗಳಿಗೆ ಮಾತ್ರ ಹೊರತು ಪಡಿಸಿ ಬೇರೆಲ್ಲಾ ಜನಪ್ರತಿನಿಧಿಗಳಿಗೆ ಹಾಗೂ ಸಹಕಾರಿ ಸಂಘದ ಪ್ರತಿನಿಧಿಗಳನ್ನು ಕೂಡ ಸಾಲ ಮನ್ನ ವ್ಯಾಪ್ತಿಗೆ ಒಳಪಡಿಸಲಿಚುನಾಯಿತ ಜನಪ್ರತಿನಿಧಿಗಳ ಪೈಕಿ ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳು ಸೇರ್ಪಡೆಯಾಗುತ್ತದೆ. ಶಾಸಕರಿಗೆ ಹಾಗೂ ಸಂಸದರಿಗೆ ವೇತನ ವ್ಯವಸ್ಥೆ ಇದ್ದು, ಬತ್ಯೆಗಳು ಪ್ರತ್ಯೇಕವಾಗಿ ನೀಡಲಾಗುತ್ತದೆ. ಆದರೆ ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳು ಕನಿಷ್ಠ ಗೌರವಧನವನ್ನು ಪಡೆದು ಗ್ರಾಮೀಣ ಪ್ರದೇಶದಲ್ಲಿ ಓಡಾಡಿಕೊಂಡು ಜನ ಸೇವೆಯನ್ನು ನಡೆಸುತ್ತಿದ್ದಾರೆ.
ಸರ್ಕಾರದ ಈಗಿನ ನಿಲುವು ಪ್ರಾಮಾಣಿಕ ಜನ ಸೇವೆಯನ್ನು ಅಣಕಿಸುವಂತಿದ್ದು, ರೈತರು ಜನಪ್ರತಿನಿಧಿಗಳಾಗಿರುವುದು ತಪ್ಪು ಎಂಬಂತಿದೆ. ಜನಪ್ರತಿನಿಧಿಯಾಗಿ ಆಯ್ಕೆಯಾದ ರೈತ ಆತ್ಮಹತ್ಯೆ ಮಾಡಿಕೊಂಡರೂ ಸರ್ಕಾರಕ್ಕೆ ನಷ್ಟವಿಲ್ಲವೆಂಬಂತಿದೆ.
ರೈತರು ಚುನಾವಣೆಗೆ ಸ್ಪರ್ಧಿಸಬಾರದಾ, ಚುನಾಯಿತ ರೈತನ ಬಗ್ಗೆ ಸಂಶಯವಿದೆಯಾ, ಚುನಾಯಿತನಾದ ತಕ್ಷಣ ಆ ವ್ಯಕ್ತಿ ಶ್ರೀಮಂತನಾದಹಾಗೇಯಾ, ಕನಿಷ್ಟ ಗೌರವ ಧನ ಪಡೆದು ಪ್ರಾಮಾನಿಕ ಜನ ಸೇವೆ ಮಾಡಿದ ತಪ್ಪಿಗಾಗಿ ಈ ಶಿಕ್ಷೆಯನ್ನು ನೀಡಲಾಗುತ್ತಿದೆಯಾ
ಸರ್ಕಾರ ಇದೇ ಷರತ್ತಿನಲ್ಲಿ ಸಾಲಾ ಮನ್ನಾ ಮಾಡಿದಲ್ಲಿ ಮುಂದಿನ ದಿನದಲ್ಲಿ ಕೃಷಿ ಕುಟುಂಬಗಳು ರಾಜಕೀಯದಿಂದ ದೂರ ಉಳಿಯುವ ಸ್ಥಿತಿ ನಿರ್ಮಾಣವಾದೀತು.