ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಜರಗಿತು.
ಮಾಜಿ ಸಚಿವ ಬಿ.ರಮಾನಾಥ ರೈ ಒಂದನೇ ತರಗತಿಗೆ ದಾಖಲಾದ ಮಕ್ಕಳಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿ, ಮೆರವಣಿಗೆಯನ್ನು ಉದ್ಘಾಟಿಸಿ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು. ಮಕ್ಕಳಿಗೆ ಫಲ ಪುಷ್ಪ-ಹಾರಾರ್ಪಣೆ,ಆರತಿ ಬೆಳಗಿಸುವಿಕೆ ,ಸಿಹಿ ತಿಂಡಿ ವಿತರಣೆ ಕಾರ್ಯಕ್ರಮಗಳೊಂದಿಗೆ ಕೆದ್ದಳಿಕೆ ಶಾಲಾ ಪ್ರಾರಂಭೋತ್ಸವ ಸಂಪನ್ನಗೊಂಡಿತು.
ವಾದ್ಯ-ಬ್ಯಾಂಡ್‌ಗಳ ನಿನಾದ, ವಿವಿಧ ವೇಷ ಭೂಷಣಗಳ ಕುಣಿತ, ವಿವಿಧ ಘೋಷಣೆಗಳ ಆಕರ್ಷಣೆಯೊಂದಿಗೆ ನೂತನವಾಗಿ ಒಂದನೇ ತರಗತಿಗೆ ಸೇರ್ಪಡೆಗೊಂಡ ಮಕ್ಕಳನ್ನು ಮೆರವಣಿಗೆ ಮೂಲಕ ಶಾಲೆಗೆ ಕರೆತರಲಾಯಿತು. ಇದೇ ವೇಳೆ ದಿಬ್ಬಣ ಮೆರವಣಿಗೆಯಲ್ಲಿ ಬಂದ ಮಕ್ಕಳನ್ನು ಶಾಲಾ ಬಳಿ ಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಪನ್ನೀರು ಸಿಂಪಡಿಸಿ , ಹೂ ಹಾಕಿ ಸ್ವಾಗತಿಸಿದರು. ಬಳಿಕ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ಹಣ್ಣು ಹಂಪಲು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಊರವರಿಂದ ಶಾಲೆಗೆ ಹೊರೆಕಾಣಿಕೆ ನೀಡಲಾಯಿತು. ತರಕಾರಿಗಳು, ಅಕ್ಕಿ, ತೆಂಗಿನಕಾಯಿ ಮೊದಲಾದ ಹೊರೆಕಾಣಿಕೆ ಶಾಲೆಗೆ ಸಮರ್ಪಣೆಯಾಯಿತು.
ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್ ಹೊರೆ ಕಾಣಿಕೆ ಉಗ್ರಾಣವನ್ನು ಉದ್ಘಾಟಿಸಿದರು.ಗ್ರಾ.ಪಂ. ಅಧ್ಯಕ್ಷ ಸಂತೋಷ್ ಪೂಂಜ, ಮಾಜಿ ಅಧ್ಯಕ್ಷ ಬಾಲಕೃಷ್ಣ ಅಂಚನ್, ಗ್ರಾ.ಪಂ.ಸದಸ್ಯರಾದ ಸತೀಶ್ ಪಡಂತ್ರಬೆಟ್ಟು ,ಮೋಹನ ಆಚಾರ್ಯ, ಶಾಲಾಭಿವೃದ್ದಿ ಸಮಿತಿ ಮಾಜಿ ಅಧ್ಯಕ್ಷ ದಿವಾಕರ ದಾಸ್, ಪ್ರಗತಿಪರ ಕೃಷಿಕ, ಪತ್ರಕರ್ತ ಶ್ರೀನಿವಾಸ ನಾಯಕ್ ಇಂದಾಜೆ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಚಂದ್ರಾವತಿ, ಸದಸ್ಯರಾದ ರಾಜಗೋಪಾಲ, ಯೋಗೀಶ ಆಚಾರ್ಯ, ವಿಶಾಲಾಕ್ಷಿ, ಶಾಲಾ ಶಿಕ್ಷಕ ವೃಂದ, ಪೋಷಕರು ಉಪಸ್ಥಿತರಿದ್ದರು. ಈ ಸಂದರ್ಭ ರೈ ಅವರು ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಮತ್ತು ಉಚಿತ ಲೇಖನ ಪುಸ್ತಕಗಳನ್ನು ವಿತರಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಉಮಾ ಡಿ.ಗೌಡ ಸ್ವಾಗತಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಶೆಟ್ಟಿ ಕಾವಳಕಟ್ಟೆ ಪ್ರಸ್ತಾವಿಸಿದರು. ಶಿಕ್ಷಕ ಚಂದಪ್ಪ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.