www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ ತಾಲೂಕಿನಾದ್ಯಂತ ಮಂಗಳವಾರ ಸುರಿದ ಮಳೆಗೆ ವ್ಯಾಪಕ ಹಾನಿಯಾಗಿದ್ದು, ಅವುಗಳಲ್ಲಿ ನರಿಕೊಂಬು, ಆಲಾಡಿ, ಮಾರ್ನಬೈಲು, ಮಂಚಿ ಪ್ರದೇಶಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬುಧವಾರ ಭೇಟಿ ನೀಡಿದರು.
ಸ್ಥಳದಿಂದಲೇ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ತುರ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ನರಿಕೊಂಬು ಗ್ರಾಮದಲ್ಲಿ ವಿಶ್ವನಾಥ ಹಾಗೂ ಬಾಬು ಎಂಬವರ ಮನೆ ಗೋಡೆ ಕುಸಿದು ಹಾನಿಯಾಗಿದ್ದರೆ, ಎರಿಮಲೆ ಕಾಡೆದಿ ದೇವಸ್ಥಾನದ ಮುಂಭಾಗದಲ್ಲಿ ಮಣ್ಣು ಕುಸಿದಿದ್ದು,ಈ ಬಗ್ಗೆ ನಷ್ಟದ ಕುರಿತು ಅಂದಾಜಿಸುವಂತೆ ಸೂಚಿಸಿದರು.
ಮಂಗಳೂರಿಗೆ ಕುಡಿಯುವ ನೀರು ಪೂರೈಕೆಗಾಗಿ ತುಂಬೆ ವೆಂಟೆಡ್ ಡ್ಯಾಂ ನಲ್ಲಿ ನೀರು ಸಂಗ್ರಹಕ್ಕೆ ಆರು ಮೀಟರ್ ಗೆ ಹಾಕಲಾದ ಹಲಗೆಯನ್ನುತೆರವುಗೊಳಿಸದಿರುವುದರಿಂದ ಸಂಬಾರಗುರಿ ಪ್ರದೇಶದಲ್ಲಿ ತೋಟಗಳಿಗೆ ನೀರು ನುಗ್ಗಿ ಮುಳುಗಡೆಯಾಗಿದ್ದು, ಅಡಕೆ ತೋಟಕ್ಕೆ ಅಪಾರ ನಷ್ಟ ವುಂಟಾಗುವ ಆತಂಕ ಕೃಷಿಕರನ್ನು ಕಾಡಿದೆ. ಇದನ್ನು ಪರಿಶೀಲಿಸಿದ ಶಾಸಕ ತಾಲೂಕು ತೋಟಗಾರಿಕಾ ಇಲಾಖಾಧಿಕಾರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ನಷ್ಟದ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದರು. ಸಜೀಪ ಮುನ್ನೂರುಗ್ರಾಮದ ಅಲಾಡಿ ಜುಮಾದಿ ದೈವಸ್ಥಾನದ ತಡೆಗೋಡೆ ಸಂಪೂರ್ಣ ಕುಸಿದಿದ್ದು, ನಷ್ಟದ ಬಗ್ಗೆ ಅಂದಾಜಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು.
ಮಳೆಗೆ ಕುಸಿದ ಸೇತುವೆ
ಮಂಗಳವಾರ ಸುರಿದ ಮಳೆಗೆ ಮಂಚಿ ಗ್ರಾಮದ ನೂಜಿ ಆಲಬೆಯಲ್ಲಿ ಕಾಲು ಸೇತುವೆಯೊಂದು ಮುರಿದು ಬಿದ್ದಿದೆ. ಇದರಿಂದ ಈ ಭಾಗದ ಸಂಪರ್ಕಕ್ಕೆ ಸಮಸ್ಯೆ ಉಂಟಾಗಿದೆ. ಇದನ್ನು ಪರಿಶೀಲಿಸಿದ ಶಾಸಕರು, ಶೀಘ್ರದಲ್ಲಿ ಸೇತುವೆಯನ್ನು ಪುನರ್ ನಿರ್ಮಿಸಿಕೊಡುವ ಭರವಸೆಯನ್ನು ಗ್ರಾಮಸ್ಥರಿಗೆ ನೀಡಿದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಭಾಗದ ಸಂಪರ್ಕ ಕೊಂಡಿ ಕಳಚಿ ಬಿದ್ದಿದೆ. ಇನ್ನೂ ಭಾರಿ ಮಳೆಯಾದರೆ ಆ ಭಾಗದ ಜನರಿಗೆ ಇತ್ತ ಕಡೆಗೆ ಬರಲು ಸಾಧ್ಯವಾಗದೇ ದ್ವೀಪದಲ್ಲಿ ಬದುಕುವಂತಹ ಸ್ಥಿತಿ ನಿರ್ಮಾಣವಾಗಲಿದೆ. ಆದ್ದರಿಂದ ಆದಷ್ಟು ಬೇಗ ಈ ಸೇತುವೆ ಪುನರ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕರ ಜೊತೆಗೆ ತಾಪಂ ಸದಸ್ಯ ಪ್ರಭಾಕರ ಪ್ರಭು,ಕ್ಷೇತ್ರ ಬಿಜೆಪಿ ಸಮಿತಿ ಪ್ರ.ಕಾರ್ಯದರ್ಶಿ ರಾಮದಾಸ ಬಂಟ್ವಾಳ್, ಎಪಿಎಂಸಿ ಸದಸ್ಯ ಪುರುಷೋತ್ತಮ ಶೆಟ್ಟಿ, ಪ್ರಮುಖರಾದ ಗಣೇಶ್ ರೈ ಮಾಣಿ, ರಮಾನಾಥ ರಾಯಿ, ದಿನೇಶ್ ಅಮ್ಟೂರು, ನರಿಕೊಂಬು ಪಂಚಾಯತ್ ಅಧ್ಯಕ್ಷ ಯಶೋಧರ ಕರ್ಬೆಟ್ಟು,ಮಾಜಿ ತಾಪಂ ಸದಸ್ಯ ಆನಂದ ಶಂಭೂರು,ಪುರುಷೋತ್ತಮ ಟೈಲರ್ ,ಪ್ರವೀಣ ಗಟ್ಟಿ,ಅರವಿಂದ ಭಟ್, ರಮೇಶ್ ರಾವ್ ಸಂತೋಷ ಗುಂಡಿಮಜಲು ಮೊದಲಾದವರಿದ್ದರು.