www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬೆಳಗ್ಗೆ ಮೋಡ ಕವಿದಿದ್ದರೂ ಮಕ್ಕಳು, ಪೋಷಕರು, ಊರವರು ಸೇರಿ ಹಬ್ಬದ ವಾತಾವರಣ ಮೂಡಿಸಿದ ಮೆರವಣಿಗೆ, ಹಸಿರು ಹೊರೆಕಾಣಿಕೆ, ಮೆರವಣಿಗೆಯಲ್ಲಿ ಬಂದ ಮಕ್ಕಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯಿಂದಲೇ ಸಿಹಿ ತಿನಿಸು, ತುಳುನಾಡ ಸಾಂಪ್ರದಾಯಿಕ ದಿರಿಸಿನಲ್ಲಿ ಮಕ್ಕಳ ಖುಷಿ.
ಇದು ಬಂಟ್ವಾಳ ತಾಲೂಕಿನ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಶಾಲಾ ಆರಂಭೋತ್ಸವದ ಸಂಭ್ರಮ.
ಕರೆಂಕಿ ಶ್ರೀ ದುರ್ಗಾಪರಮೇಶ್ವರೀ ದೇವಿ ದೇವಸ್ಥಾನದಿಂದ ಶಾಲೆಯವರೆಗೆ ವೈಭವದ ಮೆರವಣಿಗೆ ನಡೆಯಿತು. ದೇವಿ ಸಾನಿಧ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಎಸ್‌ಡಿಎಂಸಿ ಅಧ್ಯಕ್ಷ ರಾಮಚಂದ್ರ ಕರೆಂಕಿ ಅವರು ಕಲಶವನ್ನು ವಿದ್ಯಾರ್ಥಿಗೆ ಹಸ್ತಾಂತರಿಸಿದರು. ಈ ಮೂಲಕ ಮೆರವಣಿಗೆಗೆ ಚಾಲನೆ ದೊರಕಿತು. ಶಾಲಾ ವಿದ್ಯಾರ್ಥಿಗಳು ಸೇರಿದಂತೆ ವಿದ್ಯಾರ್ಥಿಗಳ ಪೋಷಕರು, ದುರ್ಗಾ ಫ್ರೆಂಡ್ಸ್ ಕ್ಲಬ್ ಸದಸ್ಯರು, ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಈ ಸಂದರ್ಭ ಶಿಕ್ಷಣದ ಮಹತ್ವ ಸಾರುವ ಫಲಕಗಳನ್ನು ವಿದ್ಯಾರ್ಥಿಗಳು ಹೊತ್ತರು.
ಶಾಲೆಗೆ ಬಂದ ವಿದ್ಯಾರ್ಥಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗೆ ಹಸಿರು ಹೊರಕಾಣಿಕೆ ಸಮರ್ಪಿಸಿದರು. ಮೆರವಣಿಗೆಯಲ್ಲಿ ಸಾಗಿ ಬಂದ ವಿದ್ಯಾರ್ಥಿಗಳಿಗೆ ಸಿಹಿ ತಿನಿಸು ಕೊಟ್ಟು ಶಿಕ್ಷಣಾಧಿಕಾರಿ ಶಿವಪ್ರಕಾಶ್ ಶಾಲೆಗೆ ಸ್ವಾಗತಿಸಿದರು. ಬಳಿಕ ಎಲ್ಲಾ ವಿದ್ಯಾರ್ಥಿಗಳಿಗೂ ಸಿಹಿ ಹಾಗೂ ಕಷಾಯ ನೀಡಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಎಲ್ಲರೂ ಪಾಯಸದೂಟ ಸವಿದರು.
ಸಭಾ ಕಾರ್ಯಕ್ರಮ:
ಶಾಲೆಯನ್ನು ದತ್ತು ಸ್ವೀಕರಿಸಿದ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಅವರು ಮಾತನಾಡಿ ಶಾಲೆ ಎನ್ನುವುದು ಸರ್ವಧರ್ಮದ ದೇಗುಲ. ಶಾಲೆ ಅಭಿವೃದ್ದಿ ಆಗಬೇಕಾದರೆ ಊರಿನ ಜನರ ಸಹಕಾರ ಅಗತ್ಯ ಎಂದರು. ಕ್ಷೇತ್ರ ಶಿಕ್ಷಾಣಾಧಿಕಾರಿ ಶಿವಪ್ರಕಾಶ್ ಮಾತನಾಡಿ ದಡ್ಡಲಕಾಡು ಶಾಲೆಯಲ್ಲಿ ಆದ ಪ್ರಯೋಗದ ಬಳಿಕ ತಾಲೂಕಿನ ಅನೇಕ ಸರಕಾರಿ ಶಾಲೆಗಳು ವರ್ಷದಿಂದ ವರ್ಷಕ್ಕೆ ಅಭಿವೃದ್ದಿಯಾಗುತ್ತಿದೆ ಎಂದರು. ದಡ್ಡಲಕಾಡು ಶಾಲೆಗೆ ದೈಹಿಕ ಶಿಕ್ಷಕರ ಹುದ್ದೆಯನ್ನು ಮಂಜೂರುಗೊಳಿಸಲಾಗಿದ್ದು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಶಿಕ್ಷಕರನ್ನು ಸರಕಾರ ಒದಗಿಸುತ್ತದೆ ಎಂದರು.
ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಮಚಂದ್ರ ಕರೆಂಕಿ, ಉಪಾಧ್ಯಕ್ಷೆ ಚಿತ್ರಾಕ್ಷಿ, ಪಂಜಿಕಲ್ಲು ಗ್ರಾ.ಪಂ. ಅದ್ಯಕ್ಷೆ ಸುಮಿತ್ರಾ ಯೋಗೀಶ್ ಕುಲಾಲ್, ಶ್ರೀ.ಕ್ಷೇ.ಧ.ಗ್ರಾ. ಯೋ. ರಮೇಶ್, ಪಂಚಾಯಿತಿ ಸದಸ್ಯರಾದ ಪೂವಪ್ಪ ಮೆಂಡನ್, ರೂಪಾಶ್ರೀ, ಪತ್ರಕರ್ತರಾದ ಹರೀಶ್ ಮಾಂಬಾಡಿ, ಅಬುಲ್ ರಹಿಮಾನ್ ತಲಪಾಡಿ, ಸಂದೀಪ್ ಸಾಲ್ಯಾನ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಮೌರೀಸ್ ಸ್ವಾಗತಿಸಿ, ಶಿಕ್ಷಕಿ ಅನಿತಾ ವಂದಿಸಿದರು. ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.