ಬಂಟ್ವಾಳ ತಾಲೂಕಿನ ಮೂಡುನಡುಗೋಡು ಗ್ರಾಮದ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೊದಲ ಅಂತಸ್ತಿನ ಕಟ್ಟಡ ನಿರ್ಮಾಣ ಕಾರ್ಯ ಪುನಾರಂಭಗೊಂಡಿದ್ದು, ಭಾನುವಾರ ನೂರಕ್ಕಿಂತಲೂ ಅಧಿಕ ಮಂದಿ ವಿದ್ಯಾರ್ಥಿಗಳ ಪೋಷಕರು, ಶಿಕ್ಷಕರು, ದುರ್ಗಾ ಫ್ರೆಂಡ್ಸ್ ಕ್ಲಬ್ ಸದಸ್ಯರು, ವಿದ್ಯಾರ್ಥಿಗಳು ಶ್ರಮದಾನ ಸೇವೆಯ ಮೂಲಕ ಶಾಲಾ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡರು.
ಸರಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಆಂದೋಲನ ನಡೆಸಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿರುವ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್‌ಕ್ಲಬ್, ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಸುಮಾರು ೧.೨೦ ಕೋಟಿ ರುಪಾಯಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಮೊದಲ ಹಂತದಲ್ಲಿ ನೆಲ ಅಂತಸ್ತಿನ ಕಾಮಗಾರಿಯನ್ನು ಪೂರ್ಣಗೊಳಿಸಿ ತರಗತಿ ನಡೆಸಲು ಅವಕಾಶ ಮಾಡಿಕೊಡಲಾಯಿತು. ಇದೀಗ ಮೊದಲ ಅಂತಸ್ತಿನ ಕಾಮಗಾರಿಯನ್ನು ಆರಂಭಿಸಲಾಗಿದೆ.
ಈ ಬಾರಿ ಪೂರ್ವ ಪ್ರಾಥಮಿಕ ಹಾಗೂ ಒಂದನೇ ತರಗತಿಗೆ ನೂರೈವತ್ತಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದು ವಿದ್ಯಾರ್ಥಿಗಳ ಅನುಕೂಲದ ದೃಷ್ಟಿಯಿಂದ ವಿಸ್ತೃತ ಕಟ್ಟಡದ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇದರ ಜೊತೆಗೆ ಶಾಲಾ ಪರಿಸರದ ಸ್ವಚ್ಛತೆ, ಕೃಷಿ, ಹಳೆ ಕಟ್ಟಡದ ದುರಸ್ತಿ ಕಾರ್ಯವನ್ನು ಮಾಡಲಾಯಿತು. ಈ ಸಂದರ್ಭ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್, ಶಾಲಾ ಮುಖ್ಯ ಶಿಕ್ಷಕ ಮೌರೀಸ್ ಡಿಸೋಜಾ, ಸಹಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಮಚಂದ್ರ ಪೂಜಾರಿ ಕರೆಂಕಿ, ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಷೆ ಸುಮಿತ್ರಾ ಯೋಗೀಶ್‌ಕುಲಾಲ್, ಸದಸ್ಯ ಪೂವಪ್ಪ ಮೆಂಡನ್, ಧರ್ಣಪ್ಪ ಪೂಜಾರಿ, ಕ್ಲಬ್ ಕಾರ್ಯದರ್ಶಿ ನವೀನ್ ಎಸ್., ಪುರುಷೋತ್ತಮ ಅಂಚನ್, ವಿಠಲ್ ಡಿ., ಬಾಲಕೃಷ್ಣ ಜಿ. ಉಪಸ್ಥಿತರಿದ್ದರು.