www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾನುವಾರ ಸಂಜೆಯ ಬಳಿಕ ಮಳೆ ಸದ್ದು ಮಾಡಿತು. ರಾತ್ರಿ 9.45ರವರೆಗೂ ಮಳೆಯ ಪ್ರಮಾಣ ಕೆಲವೆಡೆ ತಗ್ಗಿಲ್ಲ. ಮಂಗಳೂರು, ಸಹಿತ ಕಡಲತೀರ, ಬಂಟ್ವಾಳ, ಬೆಳ್ತಂಗಡಿ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ನೆಲ್ಯಾಡಿ ಸಹಿತ ಪಶ್ಚಿಮ ಘಟ್ಟದ ತಪ್ಪಲಲ್ಲೂ ಮಳೆ ಸುರಿಯುತ್ತಿದೆ. ಗುಡುಗು, ಸಿಡಿಲಿನ ಹಿಮ್ಮೇಳದೊಂದಿಗೆ ಮಳೆಯಾಗುತ್ತಿದ್ದು, ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ.
ಬಿ.ಸಿ.ರೋಡ್, ಬಂಟ್ವಾಳ ಸೇರಿದಂತೆ ತಾಲೂಕಿನಾದ್ಯಂತ ಗುಡುಗು, ಸಿಡಿಲಿನೊಂದಿಗೆ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ಶೇಖರಣೆಗೊಂಡು ಜನರು ತೊಂದರೆ ಅನುಭವಿಸಿದರು. ಬಿ.ಸಿ.ರೋಡ್ ಫ್ಲೈ ಓವರ್ ಅಡಿ, ಪಾಣೆಮಂಗಳೂರು, ಬಂಟ್ವಾಳ ಪೇಟೆ ಸಹಿತ ಹಲವೆಡೆ ಚರಂಡಿಗಳು ಹೂಳೆತ್ತದ ಕಾರಣ ರಸ್ತೆಯಲ್ಲೇ ನೀರು ಹರಿಯಿತು.
ವಿಟ್ಲ ಭಾಗದಲ್ಲಿ ಭಾನುವಾರ ಸಂಜೆ ಸುರಿದ ಗುಡುಗು, ಮಿಂಚು ಸಹಿತ ಭಾರೀ ಮಳೆಗೆ ಜೀಪೊಂದರ ಮೇಲೆ ಧರೆ ಉರುಳಿ ಬಿತ್ತು. ವಿಟ್ಲ ಮುಡ್ನೂರು ಗ್ರಾಮದ ದಿನೇಶ್ ಗೌಡ ಅವರಿಗೆ ಸೇರಿದ ಬೊಲೆರೋ ಜೀಪನ್ನು ವಿಟ್ಲ-ಪುತ್ತೂರು ರಸ್ತೆಯ ಚಂದ್ರನಾಥ ಸ್ವಾಮೀ ಬಸದಿ ಬಳಿಯ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ನಿರಂತರವಾಗಿ ಸುರಿದ ಮಳೆಗೆ ಧರೆಯ ಮಣ್ಣುಗಳು ಬೊಲೆರೋ ಮೇಲೆ ಉರುಳಿದೆ. ಇದರಿಂದ ವಾಹನ ಹಾನಿಗೊಂಡಿತು. ಬಂಟ್ವಾಳ ತಾಲೂಕಿನಲ್ಲಿ ಸಂಜೆ ಪ್ರಾರಂಭಗೊಂಡ ಮಳೆ ರಾತ್ರಿ ವರೆಗೂ ಮುಂದುವರೆದಿದೆ. ಬಹುತೇಕ ಮನೆಯೊಳಗಡೆ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ. ಮಿಂಚು ಸಿಡಿಲಿನ ಅಬ್ಬರಕ್ಕೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು.