ಸಮಾಜದ ಬಂಧುಗಳ ಆಶೋತ್ತರಗಳಿಗೆ ಸ್ಪಂದಿಸಿ ಆಸಕ್ತರಿಗೆ ಆರ್ಥಿಕ ಸಹಾಯ, ಬಡವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುತ್ತಾ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನು ಬಳಸಿಕೊಂಡು ಸಮಾಜದ ಬಂಧುಗಳ ಪ್ರೀತಿಯನ್ನು ಗಳಿಸಿ ಕೊಂಡು ಕುಲಾಲ ಸಂಘವು ಉತ್ತಮ ಸೇವಾ ಚಟುವಟಿಕೆಯನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ನಡುಬೊಟ್ಟು ಕ್ಷೇತ್ರದ ದರ್ಮದರ್ಶಿ ರವಿ. ಎನ್. ತಿಳಿಸಿದರು.
ಅವರು ನಾಣ್ಯ ಮಾರಿಪಳ್ಳದ ಕುಲಾಲ ಸಮುದಾಯ ಭವನದಲ್ಲಿ ನಡೆದ ಫರಂಗಿಪೇಟೆ ಕುಲಾಲ ಸುಧಾರಕ ಸಂಘದ ರಜತ ಮಹೋತ್ಸವ ಸಮಾರಂಭದಲ್ಲಿ ಸ್ಮರಣ ಸಂಚಿಕೆ `ರಜತ ಸಿಂಧೂರ’ ಬಿಡುಗಡೆಗೊಳಿಸಿ ಸಂಘದ ರಜತ ಮಹೋತ್ಸವ ಕಾರ್ಯಕ್ರಮವು ಯಶಸ್ವಿಯಾಗಲೆಂದು ಶುಭಹಾರೈಸಿ ಆಶೀರ್ವದಿಸಿದರು.
ಅಧ್ಯಕ್ಷತೆಯನ್ನು ಜಿಲ್ಲಾ ಮಾತೃ ಸಂಘದ ಅಧ್ಯಕ್ಷ ಸುಜೀರು ಶ್ರೀಧರ ಕುಡುಪು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವ ಉದ್ಯಮಿ ಅನಿಲ್‌ದಾಸ್, ಕುಲಶೇಖರ ವೀರನಾರಾಯಣ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಪ್ರೇಮಾನಂದ ಕುಲಾಲ್, ಬಂಟ್ವಾಳ ತಾಲೂಕು ಕುಲಾಲ ಸಂಘದ ಅಧ್ಯಕ್ಷ ಡಿ.ಎಂ. ಕುಲಾಲ್, ನಿಕಟಪೂರ್ವ ಅಧ್ಯಕ್ಷ ಸತೀಶ್ ಕುಲಾಲ್, ಸಂಘದ ಅಧ್ಯಕ್ಷೆ ಉಮಾಚಂದ್ರಶೇಖರ, ರಜತಮಹೋತ್ಸವ ಸಮಿತಿ ಗೌರವಾದ್ಯಕ್ಷ ಸೇಸಪ್ಪ ಮೂಲ್ಯ ತುಂಬೆ, ಅಧ್ಯಕ್ಷ ಲಿಂಗಪ್ಪ ಕುಲಾಲ್ ಕೋಡಿ, ಸ್ಮರಣ ಸಂಚಿಕೆ ಸಂಪಾದಕಿ ಕಮಲಾ ರಮೇಶ್ ಉಪಸ್ಥಿತರಿದ್ದರು.
ನಿಕಟ ಪೂರ್ವಾಧ್ಯಕ್ಷ ಕೆ.ಆರ್. ದೇವದಾಸ್ ಸ್ವಾಗತಿಸಿದರು. ಕೃಷಿಕರಾದ ಪೂವಪ್ಪ ಬಂಗೇರ ನಾಣ್ಯ, ಚಲನಚಿತ್ರ ನಟ ಪಾಂಡುರಂಗ ಅಡ್ಯಾರ್, ಪುದು ಪಂಚಾಯತ್ ಸದಸ್ಯ ನಾಗವೇಣಿ ಹರೀಶ್ಚಂದ್ರ ಕುಲಾಲ್ ಇವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಾದ ಕು. ಶ್ರೇಯಾ ಅಡ್ಯಾರ್, ಕು. ಪ್ರತಿಭಾ ಮಾರಿಪಳ್ಳ, ಕು. ಯಕ್ಷಿತ ಎಮ್. ಕೊಡ್ಮಾಣ್, ಕು. ಧನ್ಯಶ್ರೀ ರೊಟ್ಟಿಗುಡ್ಡೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಳೆದ ೨೫ ವರ್ಷ ಸಂಘವನ್ನು ಮುನ್ನಡೆಸಿದ ನಿಕಟಪೂರ್ವ ಅಧ್ಯಕ್ಷರುಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ನಂತರ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ಕು. ತೇಜಸ್ವಿನಿ ಪ್ರಾರ್ಥಿಸಿದರು. ರಜತ ಸಮಿತಿ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕುಲಾಲ್ ವಂದಿಸಿದರು. ಸುರೇಶ್ ಎನ್., ಜಯರಾಮ ಕೆ., ನಯನಾಕ್ಷಿ ಎಸ್. ಮೂಲ್ಯ, ವಿನಯ ಕುಮಾರ್, ಶ್ರೀಮತಿ ರೇಷ್ಮಾ ವಿನಯ ಕುಮಾರ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಸಂತೋಷ್ ಸಿದ್ದಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.