ಮಂಗಳೂರಿನ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ತಲಾ ಒಬ್ಬ ರೋಗಿಯ ಗಂಟಲು ದ್ರವದ ಮಾದರಿಯನ್ನು ಮಣಿಪಾಲ ಪ್ರಯೋಗಾಲಕ್ಕೆ ನಿಫಾ ಶಂಕೆಯಲ್ಲಿ ಕಳುಹಿಸಲಾಗಿದ್ದರೂ ಇದುವರೆಗೂ ಯಾರೂ ಈ ಸೋಂಕಿನಿಂದ ರೋಗಬಾಧಿತರಿಲ್ಲ ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದುವರೆಗೂ ಜಿಲ್ಲೆಯಲ್ಲಿ ನಿಫಾ ಪ್ರಕರಣ ದೃಢಪಟ್ಟಿಲ್ಲ ಎಂದು ಡಾ.ರಾಮಕೃಷ್ಣರಾವ್ ಹೇಳಿದ್ದಾರೆ. ಅವರ ರಕ್ತದ ಮಾದರಿಯಲ್ಲಿ ಪಾಸಿಟೀವ್ ಬಂದರೆ ಪುಣೆಯ ಪ್ರಯೋಗಾಲಯಕ್ಕೆ ಮಾದರಿ ರವಾನಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ನಿಫಾ ಸೋಂಕು ನಮ್ಮನ್ನು ಆವರಿಸಿದರೆ, ಮೊದಲಿಗೆ ಅದು ಮೆದುಳಿನ ಮೇಲೆ ತನ್ನ ದುಷ್ಪರಿಣಾಮ ಬೀರುತ್ತದೆ. ಆರಂಭಲ್ಲಿ ಮೆದುಳಿನ ನರಮಂಡಲದ ಮೇಲೆ ದಾಳಿ ಮಾಡುವ ವೈರಾಣು ಪತ್ತೆಯಾಗಲು 5ರಿಂದ 14 ದಿನಗಳೇ ಬೇಕಾಗುತ್ತದೆ. ಸಾಮಾನ್ಯ ಜ್ವರ, ವಿಪರೀತ ತಲೆನೋವು, ಅತಿಯಾದ ಆಯಾಸ, ಅತಿಯಾದ ನಿದ್ರಾಹೀನತೆ, ದಿಗ್ಭ್ರಮೆ ಮತ್ತು ಮಾನಸಿಕ ಗೊಂದಲ ಈ ಸೋಂಕಿನ ಲಕ್ಷಣಗಳಾಗಿವೆ. ಕೆಲ ಪ್ರಕರಣಗಳಲ್ಲಿ ಉಸಿರಾಟದ ತೊಂದರೆ ಕೂಡ ಕಾಣಿಸಿಕೊಂಡಿದೆ. ಏನೇ ಇದ್ದರೂ ಸ್ಥಳೀಯ ವೈದ್ಯರನ್ನು ಯಾವುದೇ ಜ್ವರ, ಲಕ್ಷಣಗಳು ಕಂಡುಬಂದರೆ ಸಂಪರ್ಕಿಸಿ ಸಲಹೆ ಪಡೆಯುವುದು ಅತ್ಯುತ್ತಮ ಮಾರ್ಗ.