ಬಿಜೆಪಿ ಸರಕಾರ ಪತನದ ಬಳಿಕ ಜೆಡಿಎಸ್ – ಕಾಂಗ್ರೆಸ್ ಸರಕಾರದ ಅಧಿಕಾರಗ್ರಹಣದ ಮುನ್ಸೂಚನೆಯಿಂದ ಶನಿವಾರ ರಾತ್ರಿ ನಡೆದ ವಿಜಯೋತ್ಸವ ಸಂದರ್ಭ ವಿಟ್ಲ ಸುತ್ತಮುತ್ತಲಿನ ಪ್ರದೇಶಗಳಾದ ಕೆಲಿಂಜ, ಕನ್ಯಾನ ಸಹಿತ ಹಲವು ಪ್ರದೇಶಗಳಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ವಿಟ್ಲ ಠಾಣೆಯಲ್ಲಿ ನೂರಕ್ಕೂ ಅಧಿಕ ಮಂದಿ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಕೆಲಿಂಜದ ಅಬ್ದುಲ್ ಅಜೀಜ್ ಅವರಿಗೆ ಬಾಟಲಿಯಿಂದ ತಲೆಗೆ ಹೊಡೆದ ಪ್ರಕರಣ, ಹಿಂದೂ ಸಂಘಟನೆಯ ಕಾರ್ಯಕರ್ತ ಎಂಬ ನಿಟ್ಟಿನಲ್ಲಿ ಚಂದ್ರಶೇಖರ ಅವರಿಗೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ ಪ್ರಕರಣ, ಮಂಗಳಪದವು ಎಂಬಲ್ಲಿ ಹಸೈನಾರ್ ಎಂಬವರ ಮನೆ ಕಲ್ಲೆಸೆತ, ಗಾಜು ಪುಡಿ ಪ್ರಕರಣ, ಕುಡ್ಪಲ್ತಡ್ಕ ತಿರುವು ಬಳಿ ಗುಂಪು ಕೈಯಲ್ಲಿ ಮರದ ದೊಣ್ಣೆಗಳನ್ನು ಹಿಡಿದುಕೊಂಡು ರಸ್ತೆಯಲ್ಲಿ ಬರುತ್ತಿದ್ದ ವಾಹನಗಳನ್ನು ತಡೆದು ನಿಲ್ಲಿಸಿ ತಲೆಗೆ, ಕಾಲಿಗೆ ಹಾಗೂ ಬೆನ್ನಿಗೆ ಹಲ್ಲೆ ಮಾಡಿದ್ದೂ ಅಲ್ಲದೆ ಬೈಕ್ ಗೆ ಮರದ ದೊಣ್ಣೆಯಲ್ಲಿ ಹೊಡೆದ ಪ್ರಕರಣ, ಕುಡ್ಪಲ್ತಡ್ಕ ಅನಿಯಾಲಕೋಡಿ ಎಂಬಲ್ಲಿ ಬೈಕ್, ಕಾರು ಹಾಗೂ ಪಿಕಪ್ ನಲ್ಲಿ ಕಲ್ಲು, ಸೋಡಾ ಬಾಟ್ಲಿ, ಸೊಂಟೆ ಮತ್ತು ತಲವಾರುಗಳೊಂದಿಗೆ ಕುಡಲ್ತಡ್ಕ ಜಂಕ್ಷನ್‌ಗೆ ಬಂದು ಘೋಷಣೆ ಕೂಗಿದ ಪ್ರಕರಣ, ಎರಡು ತಂಡದ ಸುಮಾರು 23 ಮಂದಿಯ ಮೇಲೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಹಾಗೂ ಕಾನೂನು ಉಲ್ಲಂಘಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ.
ಮಂಗಳಪದವು ಎಂಬಲ್ಲಿಗೆ ಕೆಲವರು ಬೈಕಿನಲ್ಲಿ ಮತ್ತು ಉಳಿದವರು ಅಲ್ಲಿ ಓಡಾಡುವ ಜನರನ್ನು ಮತ್ತು ವಾಹನಗಳನ್ನು ತಡೆದು ನಿಲ್ಲಿಸಿದ ಪ್ರಕರಣ, ಕುಡ್ತಮುಗೇರು ಎಂಬಲ್ಲಿ ಕೊಡಂಗೈ ಕಡೆಯಿಂದ ಸುಮಾರು ೩೦ ಜನರು ಬೈಕಿನಲ್ಲಿ ಬಂದು ಕುಡ್ತಮುಗೇರು ಜಂಕ್ಷನ್ ನಲ್ಲಿ ನಿಲ್ಲಿಸಿ ಮುದ್ದ, ಧನ್ ರಾಜ್ ಎಂ, ಲಕ್ಷ್ಮೀಶ ಅವರಿಗೆ ವಿವಿಧ ರೀತಿಯ ವಸ್ತುಗಳಿಂದ ಹಲ್ಲೆ ನಡೆಸಿದ ಪ್ರಕರಣ, ಹರ್ಷಿತ್ ಹಾಗೂ ಗಣೇಶ್ ಎಂಬವರು ನಡೆದು ಹೋಗುತ್ತಿದ್ದ ಸಮಯದಲ್ಲಿ ಹಲ್ಲೆ ನಡೆಸಿದ ಪ್ರಕರಣ, ಸಾಮಾಜಿಕ ಜಾಲತಾಣದಲ್ಲಿ ಸೌಹಾರ್ಧಕ್ಕೆ ದಕ್ಕೆ ತರುವ ನಿಟ್ಟಿನಲ್ಲಿ ಸಂದೇಶ ರವಾನಿಸಿದ ಪ್ರಕರಣಗಳು ಈ ಪ್ರಕರಣಗಳಲ್ಲಿ ಸೇರಿವೆ.
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಹಾಗೂ ಸಮಾಜಿಕ ಜಾಲತಾಣದಲ್ಲ್ ಸುದ್ದಿ ಹಬ್ಬಿಸಿದ ವಿಚಾರದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ವಿಟ್ಲ ಪರಿಸರದ ಮಹಮ್ಮದ್ ಶಮೀಮ್ (28), ಅಬ್ದುಲ್ ರಹಿಮಾನ್(35), ಮಹಮ್ಮದ್ ಝಕಾರಿಯಾ(25), ಸುಲೈಮಾನ್(38) ಬಂಧಿತ ಆರೋಪಿಗಳು. ಎರಡು ದಿನಗಳ ಹಿಂದೆ ನಡೆದ ಘರ್ಷಣೆಗೆ ವೇಳೆ ವಿಡಿಯೋ ಚಿತ್ರೀಕರಣದ ಆಧಾರದ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಘರ್ಷಣೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ನೀಡಿದ ಆರೋಪದಲ್ಲಿ ಬಂಟ್ವಾಳ ತಾಲೂಕಿನ ನಿತಿನ್(29) ಹಾಗೂ ಸುಳ್ಯ ತಾಲೂಕಿನ ದಿನೇಶ ಯಾನೆ ದಯಾನಂದ(31) ಎಂಬಿಬ್ಬರನ್ನು ಬಂಧಿಸಲಾಗಿದೆ.