ಬಿಜೆಪಿ ಸರಕಾರ ಪತನಗೊಂಡು, ಜೆಡಿಎಸ್ – ಕಾಂಗ್ರೆಸ್ ಸಮ್ಮಿಶ್ರ ಮೈತ್ರಿಕೂಟ ಅಧಿಕಾರಕ್ಕೆ ಬರುವ ವಿಚಾರ ಬೆಂಗಳೂರಿನಲ್ಲಿ ನಡೆಯುತ್ತಿದ್ದರೆ, ಇಲ್ಲಿ ವಿಟ್ಲ ಸಮೀಪ ಕೆಲಿಂಜ, ಕನ್ಯಾನ, ಕುಡ್ತಮುಗೇರು ಪರಿಸರದಲ್ಲಿ ಅಶಾಂತಿ ಶನಿವಾರ ರಾತ್ರಿಯಿಂದೀಚೆಗೆ ತಲೆದೋರಿತು. ಪೊಲೀಸರು ಬೆಳಕು ಹರಿಯುವುದಕ್ಕೂ ಮುನ್ನ ಪರಿಸ್ಥಿತಿಯನ್ನು ಹತೋಟಿಗೆ ತಂದರೂ ಭಾನುವಾರ ಈ ಸಂಬಂಧ ಆರೋಪ, ದೂರುಗಳು ಕೇಳಿಬಂದವು.
ಕೆಲಿಂಜದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಹೊಯ್ ಕೈಗೆ ತಿರುಗಿ ಎರಡೂ ತಂಡಗಳ ನಾಲ್ವರು ಗಾಯಗೊಂಡಿದ್ದಾರೆ ಎಂಬ ಸುದ್ದಿ ಹರಡಿತು. ಕೊಳ್ನಾಡು ಗ್ರಾಮದ ಕುಡ್ತಮುಗೇರುವಿನಲ್ಲಿಯೂ ಗುಂಪು ಘರ್ಷಣೆ ನಡೆದ ಮಾಹಿತಿ ಬಂತು. ಕನ್ಯಾನ ಸುತ್ತಮುತ್ತಲಿನ ಪರಿಸರದಲ್ಲೂ ಅಂಗಡಿ ಮುಂಗಟ್ಟುಗಳಿಗೆ ಹಾನಿಗೆಯ್ಯಲು ದುಷ್ಕರ್ಮಿಗಳು ಪ್ರಯತ್ನಿಸಿದರು.
ಎಸ್ಪಿ ರವಿಕಾಂತೇಗೌಡ ಮಾರ್ಗದರ್ಶನದಲ್ಲಿ ಎಡಿಶನಲ್ ಎಸ್‌ಪಿ ಸಜಿತ್ ವಿ.ಜೆ., ಎಡಿಶನಲ್ ಡಿವೈಎಸ್‌ಪಿ ಡಿ.ಕುಮಾರ್, ವೃತ್ತ ನಿರೀಕ್ಷಕ ಪ್ರಕಾಶ್, ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಭಾನುವಾರ ಬೆಳಗ್ಗೆ ಬಿಜೆಪಿ ಕಚೇರಿ ಮುಂಭಾಗ ಹಿಂದು ಸಂಘಟನೆ ಮತ್ತು ಬಿಜೆಪಿಯ ಕಾರ್ಯಕರ್ತರು ಜಮಾಯಿಸಿದರು. ಸಂಸದ ನಳಿನ್ ಕುಮಾರ್ ಕಟೀಲು ಆಗಮಿಸಿ ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ಹಿಂದೂ ಸಮಿತಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಕಾರ್ಯಕರ್ತರು ಸಂಯಮ ಕಳೆದುಕೊಳ್ಳದೇ ಶಾಂತರೀತಿಯಿಂದ ವರ್ತಿಸಬೇಕು ಎಂದು ವಿನಂತಿಸಿದರು.
ಬಳಿಕ ಬಿಜೆಪಿ ಕಚೇರಿಯಿಂದ ಪೊಲೀಸ್ ಠಾಣೆಗೆ ತೆರಳಿ, ಮುಖಂಡರು ದೂರು ನೀಡಿದರು. ಶಾಲಾ ರಸ್ತೆಯಲ್ಲಿ ಪೊಲೀಸ್ ಠಾಣೆ ಮುಂಭಾಗದಲ್ಲಿ ಕಾರ್ಯಕರ್ತರು ಜಮಾಯಿಸಿದರು. ಈ ಸಂದರ್ಭ ರಾಪಿಡ್ ಆಕ್ಷನ್ ಫೋರ್ಸ್ ಸಜ್ಜಾಗಿ ನಿಂತು ಪರಿಸ್ಥಿತಿಯನ್ನು ನಿಯಂತ್ರಿಸಿತು.
ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಂಡು ಅಶಾಂತಿ ಸೃಷ್ಟಿ ಮಾಡಿದ ವ್ಯಕ್ತಿಗಳನ್ನು ಆರೋಪಿಗಳನ್ನು ಬಂಧಿಸಬೇಕು. ನಿರಪರಾಧಿಗಳ ಮೇಲೆ ಹಲ್ಲೆ ಮಾಡಿದ ಪೊಲೀಸರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಆಗ್ರಹಿಸುತ್ತೇವೆ. ತಪ್ಪಿದಲ್ಲಿ ಜಿಲ್ಲೆಯ 7 ಮಂದಿ ಶಾಸಕರ ನೇತೃತ್ವದಲ್ಲಿ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಈ ಸಂದರ್ಭ ಸುದ್ದಿಗಾರರಿಗೆ ತಿಳಿಸಿದರು.
ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಜಿಲ್ಲೆಯಲ್ಲಿ ಅಶಾಂತಿಯನ್ನು ಸೃಷ್ಟಿಮಾಡಲು ವಿಟ್ಲ ಆಸುಪಾಸಲ್ಲಿ ನಡೆದ ಗೂಂಡಾಗಿರಿಯಲ್ಲಿ ಕೇರಳದ ಗೂಂಡಾಗಳನ್ನು ಕರೆತರಲಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯ ಮಾಡಲಾಗಿದೆ ಎಂದು ಹೇಳಿದರು.
ಪುತ್ತೂರು ಮಂಡಲ ಅಧ್ಯಕ್ಷ ಚಣಿಲ ತಿಮ್ಮಪ್ಪ ಶೆಟ್ಟಿ, ಬಂಟ್ವಾಳದ ಅಧ್ಯಕ್ಷ ದೇವದಾಸ ಶೆಟ್ಟಿ, ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ರಾಜೀವ ಭಂಡಾರಿ, ಅರುಣ್ ಎಂ.ವಿಟ್ಲ, ಎಚ್.ಜಗನ್ನಾಥ ಸಾಲ್ಯಾನ್, ಮೋಹನದಾಸ ಉಕ್ಕುಡ, ಉದಯ ಆಲಂಗಾರು, ಕೆ.ಎಸ್.ಸಂಕಪ್ಪ ಗೌಡ, ವಿಷ್ಣು ಭಟ್ ಅಡ್ಯೇಯಿ, ದಯಾನಂದ ಶೆಟ್ಟಿ ಉಜ್ರೆಮಾರು ಮೊದಲಾದವರು ಉಪಸ್ಥಿತರಿದ್ದರು.