www.bantwalnews.com – ಸಂಪಾದಕ: ಹರೀಶ ಮಾಂಬಾಡಿ
9.30ರ ವೇಳೆ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ ಬಹುಮತವನ್ನು ಹೇಗೆ ಸಾಬೀತುಪಡಿಸುತ್ತರೆ ಎಂಬುದೇ ಗಮನಾರ್ಹ ಅಂಶ. ಇದನ್ನು ಇಟ್ಟುಕೊಂಡು ಸುಪ್ರೀಂ ಕೋರ್ಟ್ ಬಾಗಿಲು ಬಡಿದ ಕಾಂಗ್ರೆಸ್ – ಜೆಡಿಎಸ್ ಪಕ್ಷಗಳಿಗೆ ಪ್ರಮಾಣವಚನಕ್ಕೆ ತಡೆ ನೀಡಲು ಸುಪ್ರೀಂ ನಿರಾಕರಿಸಿದೆ. ಆದರೆ ಪ್ರಕರಣ ಅಲ್ಲಿಗೆ ಮುಗಿದಿಲ್ಲ.
ವಿಷಯವೇನು?
ರಾತ್ರೋರಾತ್ರಿ ನಡೆದ ಬೆಳವಣಿಗೆಯಲ್ಲಿ 104 ಸದಸ್ಯಬಲದ ಯಡಿಯೂರಪ್ಪ ಮುಖ್ಯಮಂತ್ರಿ ಆಗಬಾರದು ಎಂದು ಸುಪ್ರೀಂ ಕೋರ್ಟು ಮೆಟ್ಟಿಲು ಹತ್ತಿದ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ನಿರಾಸೆಯಾದರೆ, ಯಡಿಯೂರಪ್ಪ ಪ್ರಮಾಣವಚನಕ್ಕೆ ಇರುವ ಅಡ್ಡಿ ನಿವಾರಣೆ ಆದಂತಾಗಿದೆ.
ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸುಪ್ರೀಂಕೋರ್ಟಿನಜಸ್ಟೀಸ್ ಎಕೆ ಸಿಕ್ರಿ, ಎ ಬೋಬ್ಡೆ ಹಾಗೂ ಅಶೋಕ್ ಭೂಷಣ್ ಅವರಿರುವ ತ್ರಿಸದಸ್ಯ ಪೀಠ ಇದೀಗ ಹಸಿರು ನಿಶಾನೆ ತೋರಿದ್ದಾರೆ. ಆದರೆ, ವಿಚಾರಣೆ ಇನ್ನೂ ಬಾಕಿಯಿದೆ.
ಆದರೆ ಕರ್ನಾಟಕ ಸರಕಾರ ಮತ್ತು ಬಿ.ಎಸ್. ಯಡಿಯೂರಪ್ಪ ಅವರಿಗೆ ನೋಟಿಸ್ ಕಳಿಸಿರುವ ಸುಪ್ರೀಂ ಕೋರ್ಟು, ಬಿಜೆಪಿಯು ತನಗಿರುವ ಶಾಸಕರ ಬೆಂಬಲವನ್ನು ರಾಜ್ಯಪಾಲರಿಗೆ ನೀಡಿದ ಪತ್ರವನ್ನು ಪೀಠಕ್ಕೆ ಸಲ್ಲಿಸುವಂತೆ ಸೂಚಿಸಿದೆ. ಕಾಂಗ್ರೆಸ್ ಪರ ಅಭಿಷೇಕ್ ಮನು ಸಿಂಘ್ವಿ ಹಾಗೂ ಬಿಜೆಪಿ ಶಾಸಕರ ಪರ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದಾರೆ.
ಗುರುವಾರ ಮಧ್ಯಾಹ್ನ 2 ಗಂಟೆಯೊಳಗೆ ಬೆಂಬಲಿತ ಶಾಸಕರ ಪಟ್ಟಿ ಇರುವ ಪತ್ರ(ಮೇ 15/16ರಂದು ನೀಡಿದ್ದು) ವನ್ನು ಸಲ್ಲಿಸುವಂತೆ ಯಡಿಯೂರಪ್ಪ/ಬಿಜೆಪಿಗೆ ಸುಪ್ರೀಂಕೋರ್ಟ್ ಸೂಚಿಸಿದೆ,
ಕಾಂಗ್ರೆಸ್ – ಜೆಡಿಎಸ್ ಸಲ್ಲಿಸಿದ ತುರ್ತು ಅರ್ಜಿ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ತ್ರಿಸದಸ್ಯ ಪೀಠವನ್ನು ಸುಮಾರು 1 ಗಂಟೆಗೆ ರಚಿಸಿ, 1.45ಕ್ಕೆ ವಿಚಾರಣೆ ಆರಂಭಿಸಿದರು. ಈ ಸಂದರ್ಭ 15 ದಿನಗಳ ಬದಲು ಏಳು ದಿನದೊಳಗೆ ಬಹುಮತ ಸಾಬೀತುಪಡಿಸುವುದಾಗಿ ಬಿಜೆಪಿ ಪರ ವಕೀಲರು ಹೇಳಿದರು. ರಾಷ್ಟ್ರಪತಿ ಅಥವಾ ರಾಜ್ಯಪಾಲರ ಆದೇಶವನ್ನು ತಡೆಯುವ ಅಧಿಕಾರ ಕೋರ್ಟ್ ಗಿಲ್ಲ ಎಂಬ ಅಭಿಪ್ರಾಯವನ್ನು ಪೀಠ ವ್ಯಕ್ತಪಡಿಸಿತು.
ಅರ್ಜಿಯ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು. ಬೊಮ್ಮಾಯಿ ಹಾಗೂ ರಾಮೇಶ್ವರ್ ಪ್ರಸಾದ್ ತೀರ್ಪನ್ನು ಈ ಸಂದರ್ಭದಲ್ಲಿ ಕೋರ್ಟ್ ಗಮನಕ್ಕೆ ತರಲಾಯಿತು. ಸರ್ಕಾರಿಯಾ ವರದಿಯನ್ನು ಸಿಂಘ್ವಿ ಅವರು ಉಲ್ಲೇಖೀಸಿದರು. ಕಾಂಗ್ರೆಸ್ – ಜೆ.ಡಿ.ಎಸ್. ಸರಕಾರ ರಚನೆಗೆ ಅವಕಾಶ ಮಾಡಿಕೊಡದಿರುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ ಎಂದು ವಾದಿಸಿದ ಅವರು, ಬಹುಮತ ಸಾಬೀತುಪಡಿಸಲು ಬಿ.ಜೆ.ಪಿ.ಗೆ 15 ದಿನ ಕಾಲಾವಕಾಶ ನೀಡಿರುವ ಕ್ರಮವೂ ಸರಿಯಲ್ಲ ಎಂದರು.