www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಲಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಬೆಳಗ್ಗೆ 9 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ಹೇಳಿದೆ. ರಾಜಭವನದಿಂದ ಪ್ರತಿಜ್ಞಾ ವಿಧಿಗೆ ಆಹ್ವಾನ ಬಂದಿದೆ. ನಾಳೆ ಯಡಿಯೂರಪ್ಪ ಅವರೇ ಸಿಎಂ ಆಗಲಿದ್ದಾರೆ. ಬಹುಮತ ಸಾಬೀತಾಗಲು 15 ದಿನಗಳ ಕಾಲಾವಕಾಶವನ್ನು ನೀಡಿದ್ದಾರೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಬುಧವಾರ ರಾತ್ರಿ 9.45ಕ್ಕೆ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಮೂಲಕ 224 ಸದಸ್ಯಬಲದ ವಿಧಾನಸಭೆಯಲ್ಲಿ 104 ಸ್ಥಾನ ಗಳಿಸಿ (ಚುನಾವಣೆ ನಡೆದದ್ದು 222 ಸ್ಥಾನಗಳಿಗೆ) ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಶಾಸಕಾಂಗ ನಾಯಕರಾಗಿ ಆಯ್ಕೆಯಾದ ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿದ್ದಾರೆ. ಆದರೆ ಅದು ಕಾಯಂ ಆಗಲು ಅವರು 113 ಸದಸ್ಯರ ಬೆಂಬಲ ಗಳಿಸಬೇಕು.
ಚುನಾವಣಾ ಫಲಿತಾಂಶದಲ್ಲಿ 37 ಸ್ಥಾನ ಗೆದ್ದ ಜೆಡಿಎಸ್ ಸರಕಾರ ರಚನೆಗೆ 78 ಸ್ಥಾನ ಗೆದ್ದ ಕಾಂಗ್ರೆಸ್ ಬೆಂಬಲ ಸೂಚಿಸಿದೆ. ಅತಿದೊಡ್ಡ ಪಕ್ಷವಾಗಿ ಮೂಡಿಬಂದಿರುವ ಬಿಜೆಪಿ 104 ಸ್ಥಾನಗಳೊಂದಿಗೆ ಸರಕಾರ ರಚನೆಯಾದ ಬಳಿಕ ಸಂಖ್ಯೆ ಹೆಚ್ಚಳಕ್ಕೆ ಪ್ರಯತ್ನ ಮಾಡುತ್ತಿದೆ. ಹೀಗಾಗಿ ರಾಜ್ಯ ರಾಜಕೀಯ ಕುತೂಹಲದ ಘಟ್ಟಕ್ಕೆ ಬಂದಿದೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಂತೆ.!
ದೆಹಲಿಯಲ್ಲಿ ನಾಯಕರ ಸುದ್ದಿಗೋಷ್ಠಿ:
ರಾಜ್ಯಪಾಲರು ಈ ರೀತಿಯಾಗಿ ಅತಿ ದೊಡ್ಡ ಪಕ್ಷವನ್ನು ಕರೆಯುವುದು ಸಲ್ಲದು, ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮಲ್ಲಿ ಬಹುಮತ ಇದೆ ಎಂದು ಹೇಳಿದರೂ (ಚುನಾವಣೋತ್ತರ ಹೊಂದಾಣಿಕೆ) ತಮ್ಮನ್ನು ಆಹ್ವಾನಿಸಿಲ್ಲ ಎಂದು ಜೆಡಿಎಸ್ ಮತ್ತು ಕಾಂಗ್ರೆಸ್ ದೂರಿದೆ. ಈ ಕುರಿತು ದೆಹಲಿಯಲ್ಲಿ ಚಿದಂಬರಂ, ಕಪಿಲ್ ಸಿಬಲ್ ಕಾಂಗ್ರೆಸ್ ಪರವಾಗಿ ಸುದ್ದಿಗೋಷ್ಠಿ ನಡೆಸಿ ಆರೋಪವನ್ನೂ ಮಾಡಿದೆ. ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಕಾನೂನು ಸಮರ ನಡೆಸಲು ನಾಉ ಸಿದ್ಧರಿದ್ದೇವೆ ಎಂದು ಪಿ. ಚಿದಂಬರಂ, ಕಪಿಲ್ ಸಿಬಲ್, ರಣದೀಪ್ ಸುರ್ಜೆವಾಲಾ ತಿಳಿಸಿದ್ದಾರೆ. ಕೆಲ ಹೊತ್ತಿನಲ್ಲೇ ಕೇಂದ್ರ ಸಚಿವ ರವಿಶಂಕರ ಪ್ರಸಾದ್ ತುರ್ತು ಸುದ್ದಿಗೋಷ್ಠಿ ನಡೆಸಿ ರಾಜ್ಯಪಾಲರ ನಡೆಯನ್ನು ಸಮರ್ಥಿಸಿದರು. ಸಂವಿಧಾನದ ಕುರಿತು ನಮಗೆ ಕಾಂಗ್ರೆಸ್ ಪಾಠ ಕಲಿಸುವುದು ಬೇಡ ಎಂದ ಪ್ರಸಾದ್, ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರನ್ನೂ ತರಾಟೆಗೆ ತೆಗೆದುಕೊಂಡರು.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಎಂದೇ ಬಿಂಬಿಸಲಾಗಿದ್ದ ಎಚ್.ಡಿ.ಕುಮಾರಸ್ವಾಮಿ ಈ ಬೆಳವಣಿಗೆಗಳ ಕುರಿತು ಕಿಡಿಕಾರಿದ್ದಾರೆ. ಇದೀಗ ಕಾಂಗ್ರೆಸ್ – ಜೆಡಿಎಸ್ ಕೋರ್ಟ್ ಮೆಟ್ಟಿಲು ಹತ್ತುವ ಲಕ್ಷಣಗಳು ಗೋಚರವಾಗಿವೆ. ರಾತ್ರಿ 10.15ಕ್ಕೆ ಕುಮಾರಸ್ವಾಮಿ ತುರ್ತು ಸುದ್ದಿಗೋಷ್ಠಿ ಕರೆದು ರಾಜ್ಯಪಾಲರ ಕ್ರಮವನ್ನು ಕಟುವಾಗಿ ಟೀಕಿಸಿದರು. ನಾನು ನನ್ನ ಎಂಎಲ್ ಎಗಳನ್ನು ರಕ್ಷಿಸುವ ಜವಾಬ್ದಾರಿ ಇದೆ. ನಾವು ನಮ್ಮ ಶಾಸಕರನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು. ಇದಕ್ಕೆ ಬಿಜೆಪಿಯೇ ಮಾದರಿ ಎಂದರು.
ಈ ಮಧ್ಯೆ ಬಿಜೆಪಿ ಕರ್ನಾಟಕದಲ್ಲಿ ಮತ್ತೆ ಅಧಿಕಾರ ವಹಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿದ್ದಾರೆ. ತಮ್ಮ ಪಕ್ಷಕ್ಕೆ ಜನರು ಅಧಿಕಾರ ಕೊಟ್ಟಿದ್ದಾರೆ. ಹೀಗಾಗಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕು ಎಂಬ ಭಾವನೆ ಅವರಿಗಿದೆ. ಗುರುವಾರ ಬಿಜೆಪಿ ರಾಜ್ಯಾದ್ಯಂತ ಸಂಭ್ರಮಾಚರಣೆ ಮಾಡುವ ನಿರೀಕ್ಷೆ ಇದೆ. ಆದರೆ ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತುಪಡಿಸುವುದು ದೊಡ್ಡ ಸವಾಲು.