ಕವರ್ ಸ್ಟೋರಿ

ವಿಧಾನಸಭೆ ಪ್ರವೇಶಿಸಲಿದ್ದಾರೆ ಬಂಟ್ವಾಳದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು

Vote: Rajesh naik – 97802 , Ramanatha Rai – 81831

15971 ಮತಗಳ ಅಂತರದಿಂದ ಬಿಜೆಪಿಯ ರಾಜೇಶ್ ನಾಯ್ಕ್ ಗೆಲುವು ಸಾಧಿಸಿ ಬಂಟ್ವಾಳ ಕ್ಷೇತ್ರದಲ್ಲಿ ರಮಾನಾಥ ರೈ ಕ್ಷೇತ್ರ ವಿಂಗಡಣೆ ಆದ ಮೇಲೆ ಸತತ ಮೂರನೇ ಬಾರಿ ವಿಜಯಿಯಾಗುವುದಕ್ಕೆ ತಡೆಯೊಡ್ಡಿದ್ದು, ಆ ಮೂಲಕ ಕೇಸರಿ ಬಾವುಟವನ್ನು ಕ್ಷೇತ್ರದಾದ್ಯಂತ ಬೀಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಈ ರಿಸಲ್ಟ್ ಸಹಜವಾಗಿಯೇ ಶಾಕ್ ತಂದಿದೆ. ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಕ್ಷೇತ್ರ (ಯು.ಟಿ.ಖಾದರ್ ) ಹೊರತುಪಡಿಸಿ ಎಲ್ಲ ಕಾಂಗ್ರೆಸ್ ಅಭ್ಯರ್ಥಿಗಳೂ ರಮಾನಾಥ ರೈ ನೇತೃತ್ವದಲ್ಲಿ ಸೋಲು ಕಂಡದ್ದು, ಅದರಲ್ಲೂ ಸುಳ್ಯ, ಮೂಡುಬಿದಿರೆ, ಬೆಳ್ತಂಗಡಿಯಲ್ಲಿ 20 ಸಾವಿರಕ್ಕೂ ಅಧಿಕ, ಬಂಟ್ವಾಳದಲ್ಲಿ 10 ಸಾವಿರಕ್ಕೂ ಅಧಿಕ ಅಂತರದಲ್ಲಿ ಪರಾಭವ ಹೊಂದಿದ್ದು ಕಾಂಗ್ರೆಸ್ ಗೆ ದೊಡ್ಡ ಹೊಡೆತ. ಹೀಗಾಗಿಯೇ ಮಂಗಳೂರು ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳ ಪರಾಜಿತ ಕಾಂಗ್ರೆಸಿಗರು ಇವಿಎಂ ಕುರಿತು ಸಂಶಯ ವ್ಯಕ್ತಪಡಿಸಿ, ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಏನೋ ಆಗಿದೆ ಎಂಬುದು ಅವರ ಸಂಶಯ.

ಅದೇನೇ ಇದ್ದರೂ ಬಂಟ್ವಾಳದಲ್ಲಿ ರಾಜೇಶ್ ನಾಯ್ಕ್ ಗೆದ್ದಾಗಿದೆ. ಅಂದ ಹಾಗೆ ಬಿಜೆಪಿಗೆ ಗೆಲುವು ಹೊಸದೇನಲ್ಲ. 2004ರಲ್ಲಿ ನಾಗರಾಜ ಶೆಟ್ಟಿ ಅವರೂ ರೈ ಅವರನ್ನು ಸೋಲಿಸಿದ್ದರು. ಆದರೆ ಮತ್ತೆ 2008ರಲ್ಲಿ ರೈ ನಾಗರಾಜ ಶೆಟ್ಟರನ್ನು ಹಾಗೂ 2013ರಲ್ಲಿ ರಾಜೇಶ್ ನಾಯ್ಕ್ ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದರು. 2013ರಲ್ಲಿ ಸೋತ ರಾಜೇಶ್ ನಾಯ್ಕ್ ಸುಮ್ಮನೆ ಕೂರದೆ ಕ್ಷೇತ್ರದಾದ್ಯಂತ ಓಡಾಡಿದ್ದು, ಇವತ್ತಿಗೆ ಅವರ ಪಾಲಿಗೆ ಸಾರ್ಥಕವಾಗಿದೆ. ಕಾರ್ಯಕರ್ತರ ಪಲ್ಸ್ ಕಂಡುಕೊಂಡು, ಎರಡು ಬಾರಿ ಪಾದಯಾತ್ರೆ ನಡೆಸಿದ್ದು, ಬಿಜೆಪಿಗೂ ಲಾಭ ತಂದಿದೆ. ಎರಡು ಪಾದಯಾತ್ರೆ ಬಳಿಕವೂ ಬಿಜೆಪಿಗೆ ಲಾಭ ಉಂಟಾಗಿದೆ. ಮೊದಲನೇ ಪಾದಯಾತ್ರೆಯ ಬೆನ್ನಿಗೆ ಲೋಕಸಭಾ ಚುನಾವಣೆಯಲ್ಲಿ 14 ಸಾವಿರದಷ್ಟು ಅಂತರದ ಲೀಡ್ ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿಗೆ ಸಿಕ್ಕಿತ್ತು. ಎರಡನೇ ಪಾದಯಾತ್ರೆ ಬಳಿಕ ಬಿಜೆಪಿಗೆ ದೊರಕಿದ ಲೀಡ್ 15 ಸಾವಿರ ದಾಟಿದೆ. ರಮಾನಾಥ ರೈ ಮತ್ತು ಕಾಂಗ್ರೆಸ್ ನ ಸ್ಥಳೀಯ ಮುಖಂಡರು ಸೋಲಿನ ಆತ್ಮಾವಲೋಕನ ಮಾಡುತ್ತಿದ್ದರೆ, ಬಿಜೆಪಿಯ ಕಾರ್ಯಕರ್ತರು ಇಡೀ ಬಂಟ್ವಾಳ ಕ್ಷೇತ್ರದುದ್ದಕ್ಕೂ ವಿಜಯೋತ್ಸವದ ಸಂಭ್ರಮದಲ್ಲಿದ್ದಾರೆ.

ರಾಜೇಶ್ ನಾಯ್ಕ್ ಬಗ್ಗೆ:

ಪ್ರಗತಿಪರ ಕೃಷಿಕರಾಗಿ 200ಕ್ಕೂ ಅಧಿಕ ತಳಿಯ ಗೋವುಗಳನ್ನು ಸಾಕಿ ಮಾದರಿ ಕೃಷಿಕನಾಗಿ, ಪ್ರಗತಿಪರ ರೈತನಾಗಿ ಹೆಸರುಗಳಿಸಿರುವ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ರಾಜಕೀಯಕ್ಕೆ ಸಕ್ರಿಯವಾಗಿ ಎಂಟ್ರಿ ಪಡೆದದ್ದು ಕಳೆದ ಬಾರಿಯ ಚುನಾವಣೆಯಲ್ಲಿ. 2013ರ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದಿಂದ ರಮಾನಾಥ ರೈ ವಿರುದ್ಧ ಸ್ಪರ್ಧಿಸಿ ಸೋತ ಬಳಿಕ 2014, ಜನವರಿ 14ರಂದು ಪೊಳಲಿ ಶ್ರೀ ರಾಜರಾಜೇಶ್ವರಿ ಸನ್ನಿಧಿಯಿಂದ ಗ್ರಾಮದೆಡೆಗೆ ಬಿಜೆಪಿ ನಡಿಗೆ ಮನೆಮನೆಗೆ ಬಿಜೆಪಿ ಎಂಬ ಘೋಷಣೆಯೊಂದಿಗೆ ಪಾದಯಾತ್ರೆ ಹೊರಟು, 13 ದಿನಗಳ ಕಾಲ ಬಂಟ್ವಾಳ ಕ್ಷೇತ್ರದ 56 ಗ್ರಾಮಗಳ ವ್ಯಾಪ್ತಿಯಲ್ಲಿ 272 ಕಿ.ಮೀ. ಕಾಲ್ನಡಿಗೆಯಲ್ಲಿ ಸಂಚರಿಸಿದರು. 2014 ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಅಲೆ ಒಂದು ಕಡೆಯಾದರೆ, ಬಂಟ್ವಾಳದಲ್ಲಿ ಕಾರ್ಯಕರ್ತರ ಒಗ್ಗಟ್ಟು ಬಿಜೆಪಿಗೆ ಅಪೂರ್ವ ಯಶಸ್ಸು ತಂದುಕೊಟ್ಟಿತು. ಆ ಚುನಾವಣೆಯಲ್ಲಿ ಬಿಜೆಪಿ 83 ಸಾವಿರ ಮತಗಳನ್ನು ಪಡೆದು 13,437 ಮತಗಳ ಲೀಡ್ ಸಾಧಿಸಿತು. ಅದೇ ಹುಮ್ಮಸ್ಸಿನಿಂದ ಕಳೆದೈದು ವರ್ಷಗಳ ಅವಧಿಯಲ್ಲಿ ನಿರಂತರವಾಗಿ ಕ್ಷೇತ್ರದುದ್ದಕ್ಕೂ ಸಂಚರಿಸಿದ ರಾಜೇಶ್ ನಾಯ್ಕ್, ಮತ್ತೆ ಬಿಜೆಪಿ ಸಂಘಟನೆಗಾಗಿ 2018ರ ಜನವರಿ 14ರಂದು ಎರಡನೇ ಬಾರಿ ಪರಿವರ್ತನೆಗೆ ನಮ್ಮ ನಡಿಗೆ ಎಂಬ ಪಾದಯಾತ್ರೆಯನ್ನು ಅರಳ ಶ್ರೀ ಗರುಡ ಮಹಾಂಕಾಳಿ ದೇವಸ್ಥಾನದಿಂದ ಹೊರಟು 59 ಗ್ರಾಮ ವ್ಯಾಪ್ತಿಯಲ್ಲಿ ಸಂಚರಿಸಿದರು. ಈ ಸಂದರ್ಭ ವ್ಯಕ್ತವಾದ ಕಾರ್ಯಕರ್ತರ ಬೆಂಬಲ ವರಿಷ್ಠರ ಗಮನಕ್ಕೂ ಬಂದು ರಮಾನಾಥ ರೈ ಅವರ ವಿರುದ್ಧ ಸ್ಪರ್ಧೆಗಿಳಿಯಲು ರಾಜೇಶ್ ನಾಯ್ಕ್ ಅವರಿಗೇ ಮತ್ತೆ ಟಿಕೆಟ್ ಕೊಟ್ಟರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ