ರಾಜಧರ್ಮ ಪಾಲಿಸಿ ಕರ್ತವ್ಯ ನಿರ್ವಹಿಸಲಿದ್ದೇನೆ. ಇದು ಕಾರ್ಯಕರ್ತರ ಗೆಲುವು, ತಾಲೂಕಿನ ಎಲ್ಲ ಗ್ರಾಮ, ಬೂತ್ ಗಳಿಗೆ ತೆರಳಿ ಜನರಿಗೆ ಕೃತಜ್ಞತೆ ಸಲ್ಲಿಸಲಿದ್ದೇವೆ ಎಂದು ಬಿಜೆಪಿಯ ಬಂಟ್ವಾಳ ಕ್ಷೇತ್ರದ ಚುನಾಯಿತ ಪ್ರತಿನಿಧಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಬಿ.ಸಿ.ರೋಡಿನಲ್ಲಿ ಪಕ್ಷ ಕಚೇರಿ ಬಳಿ ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಂಟ್ವಾಳದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಇದು ಬಿಜೆಪಿಯ ಕಾರ್ಯಕರ್ತರ ಗೆಲುವು ಎಂದರು. ಕಳೆದ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ನಿರಂತರವಾಗಿ ಪಕ್ಷಕ್ಕಾಗಿ ಕೆಲಸ ಮಾಡಿದ ಪರಿಣಾಮವೇ ಈ ದೊಡ್ಡ ವಿಜಯ ಸಿಕ್ಕಿದೆ, ಇಂದು ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಯಾವುದೇ ವಿಜಯೋತ್ಸವದ ಮೆರವಣಗೆಗಳನ್ನು ನಡೆಸದೆ ಎರಡು ಮೂರು ದಿನಗಳ ಬಳಿಕ ವಿಜಯೋತ್ಸವ ಮಾಡಲಿದ್ದೇವೆ, ತಾಲೂಕಿನ ಎಲ್ಲಾ ಗ್ರಾಮ ಹಾಗೂ ಬೂತ್‌ಗಳಿಗೂ ಭೇಟಿ ಮಾಡಿ ಜನರಿಗೆ ಕೃತಜ್ಞತೆ ಸಲ್ಲಿಸಲಿದ್ದೇವೆ ಎಂದರು. ಶಾಸಕನಾಗಿ ಜವಬ್ದಾರಿ ಹೆಚ್ಚಿದೆ. ತಾಲೂಕಿನಲ್ಲಿ ರಾಜಧರ್ಮವನ್ನು ಪಾಲಿಸಿ ಎಲ್ಲರಿಗೂ ಸಮಾನ ನ್ಯಾಯ ಒದಗುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಎಂದ ಅವರು ಇದೇ ಸಂದರ್ಭ ಎಲ್ಲಾ ಮತದಾರರಿಗೂ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಕಾರ್ಯದರ್ಶಿ ರಾಮದಾಸ ಬಂಟ್ವಾಳ ಪ್ರಮುಖರಾದ ಪದ್ಮನಾಭ ಕೊಟ್ಟಾರಿ, ಹರಿಕೃಷ್ಣ ಬಂಟ್ವಾಳ, ಜಿ.ಆನಂದ, ಚೆನ್ನಪ್ಪ ಕೋಟ್ಯಾನ್, ಅಶೋಕ್ ಶೆಟ್ಟಿ ಸರಪಾಡಿ, ದಿನೇಶ್ ಅಮ್ಟೂರು, ಸುಲೋಚನಾ ಭಟ್, ಸುಗುಣ ಕಿಣಿ ಮತ್ತಿತರರು ಹಾಜರಿದ್ದರು.
ಗೆಲುವು ಖುಷಿ ಕೊಟ್ಟಿದೆ
ರಾಜೇಶ್ ನಾಯ್ಕ್ ಅವರ ಪತ್ನಿ ಉಷಾ ಆರ್.ನಾಯಕ್ ಮಾಧ್ಯಮದವರೊಂದಿಗೆ ಮಾತನಾಡಿ ಪತಿಯ ಗೆಲುವು ತುಂಬಾ ಖುಷಿ ಕೊಟ್ಟಿದೆ ಎಂದರು. ಈ ಗೆಲುವು ಕಾರ್ಯಕರ್ತರಿಗೆ ಸಂದ ಜಯವಾಗಿದೆ ಎಂದರು.