ಇವಿಎಂ ಯಂತ್ರದ ಬಗ್ಗೆ ಕೆಲವೊಂದು ಸಂಶಯವಿದೆ. ಈ ಬಗ್ಗೆ ಆರ್‌ಒ , ಜಿಲ್ಲಾಧಿಕಾರಿ ಹಾಗೂ ಚುನಾವಣಾ ಅಧಿಕಾರಿಗಳಿಗೆ ದೂರನ್ನು ನೀಡಿದ್ದು, ಕಾನೂನಾತ್ಮಕ ಹೋರಾಟ ಮಾಡಲಾವುವುದು ಎಂದು ಬಿ.ರಮಾನಾಥ ರೈ ಹೇಳಿದ್ದಾರೆ.
ಫಲಿತಾಂಶದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾನು ಇವಿಎಂ ಯಂತ್ರದ ಕೆಲವೊಂದು ದೋಷಗಳ ಬಗ್ಗೆಯೂ ಈ ಮೊದಲು ಉಲ್ಲೇಖ ಮಾಡಿದ್ದೆ. ಕಾಂಗ್ರೆಸ್‌ಗೆ ಮುನ್ನಡೆ ಸಿಗಬೇಕಾಗಿದ್ದ ಬೂತ್‌ಗಳಲ್ಲಿ ಸರಿಯಾದ ಫಲಿತಾಂಶ ಲಭ್ಯವಾಗಿಲ್ಲ ಹಾಗೂ ಇನ್ನಿತರ ಗೊಂದಲಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದೇವೆ ಎಂದು ಹೇಳಿದರು.
ಶಾಸಕ, ಸಚಿವನಾಗಿ ಸಾರ್ವಜನಿಕ ಬದುಕಿನಲ್ಲಿ ಬಹಳಷ್ಟು ಕೆಲಸ ಮಾಡುತ್ತಾ ಬಂದಿದ್ದೇನೆ. ಅಭಿವೃದ್ಧಿ ಕೆಲಸಗಳನ್ನು ಮಾಡುವವರನ್ನು ಗುರಿಯಾಗಿಸಿಕೊಂಡು ಉದ್ದೇಶ ಪೂರ್ವಕವಾಗಿ ಐಟಿ ದಾಳಿ ಮೂಲಕ ಬೆದರಿಸುವ ತಂತ್ರವನ್ನು ಮಾಡಿದೆ ಎಂದು ದೂರಿದರು.
ತಾನು ಚುನಾವಣೆಯಲ್ಲಿ ೮ನೆ ಬಾರಿ ಸ್ಪರ್ಧಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಯಾವ ರೀತಿಯಾದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದೆ ಎಂಬುವುದು ಜನರಿಗೆ ತಿಳಿದಿದೆ ಎಂದರು.ಇನ್ನೂ ಕೂಡಾ ಜನರ ನಡುವೆ ಇರುತ್ತೇನೆ. ಕ್ಷೇತ್ರದ ಜನರ ಸಮಸ್ಯೆಗಳನ್ನು ಸ್ಪಂದಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಸಾಮಾಜಿಕ ಸೇವೆಯ ಜೊತೆಗೆ ಸಾಮರಸ್ಯದ ನೆಲೆಯನ್ನು ಬಲಪಡಿಸಲು ತಮ್ಮ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಪಕ್ಷದ ಬಲವರ್ಧನೆಗಾಗಿ ಮತ್ತಷ್ಟು ಶ್ರಮಿಸುತ್ತೇನೆ ಎಂದರು.