ಆಪ್ ಕಾ ಬೂತ್ ಬಚಾವೋ – ಇದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಂಟ್ವಾಳದ ಬಿಜೆಪಿ ಕಾರ್ಯಕರ್ತರಿಗೆ ನೀಡಿದ ಸಲಹೆ.
ಬಿ.ಸಿ.ರೋಡಿನಲ್ಲಿ ಯೋಗಿ ಆದಿತ್ಯನಾಥ್ ಅವರ ಭರ್ಜರಿ ರೋಡ್ ಶೋ ಗುರುವಾರ ಮಧ್ಯಾಹ್ನ ನಡೆಯಿತು. ಯೋಗಿ, ಮೋದಿ, ರಾಜೇಶ್ ನಾಯ್ಕ್ ಪರ ಜಯಘೋಷದೊಂದಿಗೆ ಬಿಜೆಪಿ ಬಾವುಟ ಹಾರಿಸಿ, ಕೇಸರಿ ಶಾಲು ಹಾಕಿಕೊಂಡು ಪೊಳಲಿ ದ್ವಾರದಿಂದ ಬ್ರಹ್ಮಶ್ರೀ ನಾರಾಯಣಗುರು ವೃತ್ತದವರೆಗೆ ತೆರೆದ ವಾಹನದಲ್ಲಿ ಬಿಗು ಭದ್ರತೆಯೊಂದಿಗೆ ಆಗಮಿಸಿದ ಯೋಗಿ ಆದಿತ್ಯನಾಥ್ ಅವರನ್ನು ಬಿಜೆಪಿ ಕಾರ್ಯಕರ್ತರು ಭರ್ಜರಿಯಾಗಿ ಸ್ವಾಗತಿಸಿದರು. ಈ ಸಂದರ್ಭ ಪಕ್ಷದ ನಾಯಕರೊಂದಿಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ ಭಟ್ ಅವರೂ ಹೆಜ್ಜೆ ಹಾಕಿದರು.
ಬಳಿಕ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಇರುವ ಮೈದಾನದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಯೋಗಿ, ಸಿದ್ಧರಾಮಯ್ಯ ಸರಕಾರದ ಮಂತ್ರಿಗಳು ಮಾಯಾವಿಗಳು. ಮತದಾರರಿಗೆ ಪ್ರಲೋಭನೆಗಳನ್ನು ನಾನಾ ರೀತಿಯಲ್ಲಿ ಕೊಡುವ ಸಾಧ್ಯತೆ ಇದೆ. ಆ ಕಾರಣಕ್ಕಾಗಿ ನಿಮ್ಮ ಬೂತ್ ಗಳನ್ನು ರಕ್ಷಿಸಿ. ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಪರವಾಗಿ ಮತ ಹಾಕುವಂತೆ ಮಾಡಿ ಎಂದರು. ಕರ್ನಾಟಕ ಜನರ ಪಾಲಿಗೆ ಅಸುರಕ್ಷಿತವಾಗಿದೆ ಎಂದ ಯೋಗಿ ಇದಕ್ಕೆ ಒಂದೇ ಉತ್ತರ ಸರಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ ಎಂದರು.
ಸಂಘ ಪರಿವಾರದ ಶಾಲೆಗಳ ಮಧ್ಯಾಹ್ನದ ಭೋಜನಕ್ಕೆ ದೇವಸ್ಥಾನದಿಂದ ಕೊಡುವ ದೇಣಿಗೆಯನ್ನು ರೈ ರದ್ದುಪಡಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮತ್ತೆ ಬಿಸಿಯೂಟಕ್ಕೆ ದೇಣಿಗೆ ನೀಡುವಂತೆ ಮಾಡುತ್ತೇವೆ ಎಂದು ಘೋಷಿಸಿದರು.
ಈ ಸಂದರ್ಭ ಮಾತನಾಡಿದ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಯೋಗಿ ಆದಿತ್ಯನಾಥ್ ಸಂತರು. ಅವರಿಗೆ ನೀಡುವ ಗುರುಕಾಣಿಕೆಯೆಂದರೆ ಬಂಟ್ವಾಳದಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡುವುದು ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕರಾದ ಕೆ. ಪದ್ಮನಾಭ ಕೊಟ್ಟಾರಿ, ಪಕ್ಷ ಪ್ರಮುಖರಾದ ಬಿ.ದೇವದಾಸ ಶೆಟ್ಟಿ, ಸುಲೋಚನಾ ಭಟ್, ಎ.ರುಕ್ಮಯ ಪೂಜಾರಿ, ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ, ಚೆನ್ನಪ್ಪ ಕೋಟ್ಯಾನ್, ಹರಿಕೃಷ್ಣ ಬಂಟ್ವಾಳ, ದಿನೇಶ್ ಅಮ್ಟೂರು, ದಿನೇಶ್ ಭಂಡಾರಿ, ವಿವಿಧ ಮಹಿಳಾ ಮೋರ್ಚಾ ಪ್ರಮುಖರು, ಜಿಪಂ, ತಾಪಂ ಸದಸ್ಯರು, ಪುರಸಭಾ ಸದಸ್ಯರ ಸಹಿತ ಕಾರ್ಯಕರ್ತರ ದಂಡು ಪಾದಯಾತ್ರೆಯಲ್ಲಿ ಯೋಗಿ ಅವರೊಂದಿಗೆ ಹೆಜ್ಜೆ ಹಾಕಿತ್ತು.
ಚಿತ್ರಗಳು: ಕಿಶೋರ್ ಪೆರಾಜೆ ಮತ್ತು ಪದ್ಮನಾಭ ರಾವ್