ಬಂಟ್ವಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಶಾಸಕತ್ವದ ಅವಧಿಯಲ್ಲಿ ಇದುವರೆಗೆ ಯಾವುದೇ ಅಭಿವೃದ್ಧಿ ಆಗಿಲ್ಲ. ಕೇವಲ ಶೂನ್ಯ ಸಾಧನೆ. ಮರಳುಗಾರಿಕೆ ಕುರಿತ ಸ್ಪಷ್ಟ ನೀತಿಯೂ ಇಲ್ಲ. ಬಿಜೆಪಿ ಗೆದ್ದು, ಅಧಿಕಾರಕ್ಕೆ ಬಂದರೆ ಮರಳು ನೀತಿ ಅನುಷ್ಠಾನಕ್ಕೆ ತರುತ್ತೇವೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಂಟ್ವಾಳದ ಬಿಜೆಪಿ ಚುನಾವಣಾ ಪ್ರಚಾರ ಕಚೇರಿಯಲ್ಲಿ ಅವರು ಬುಧವಾರ ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವಾಗ ರಮಾನಾಥ ರೈ ದ.ಕ.ಜಿಲ್ಲಾ ಉಸ್ತುವಾರಿ ಆದರೋ ಅಲ್ಲಿಂದ ತಾಲೂಕಿನ ಜನರಿಗೆ ನೆಮ್ಮದಿಯೇ ಇಲ್ಲದಂತಾಗಿದೆ ಎಂದು ದೂರಿದರು. ಬಿಜೆಪಿ ಸರಕಾರದ ಅವಧಿಯಲ್ಲಿ ತರಲಾದ ಯೋಜನೆಗಳನ್ನು ಅವರು ಕಾರ್ಯರೂಪಕ್ಕಿಳಿಸಿದ್ದಾರೆಯೇ ಹೊರತು ಯಾವುದೇ ಯೋಜನೆಗಳನ್ನು ತಂದಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದರು.
ಮನೆ ಮನೆಗೆ ತೆರಳಿ ಮತಯಾಚನೆ ಮಾಡುವುದರಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ. ಈಗಾಗಲೇ ಮೂರು ಸುತ್ತಿನ ಮನೆಭೇಟಿ ಕಾರ್ಯಕ್ರಮಗಳು ನಡೆದಿವೆ. ನಾಮಪತ್ರ ಸಲ್ಲಿಕೆ ಸಂದರ್ಭವೂ ಅಭೂತಪೂರ್ವ ಜನಸ್ಪಂದನೆ ವ್ಯಕ್ತವಾಗಿ ರಾಜ್ಯಾದ್ಯಂತ ಗಮನ ಸೆಳೆದಿತ್ತು. ನಮ್ಮ ಅಭ್ಯರ್ಥಿ ತೆರಳಿದ ಕಡೆಗಳಲ್ಲೆಲ್ಲ ಜನರು ಅದ್ಭುತ ಸ್ಪಂದನೆ ನೀಡುತ್ತಿದ್ದಾರೆ ಎಂದು ನಳಿನ್ ಹೇಳಿದರು.
ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಪ್ರಮುಖರಾದ ರಾಮದಾಸ ಬಂಟ್ವಾಳ, ದೇವಪ್ಪ ಪೂಜಾರಿ, ಸಚ್ಚಿದಾನಂದ ಶೆಟ್ಟಿ, ಸುಲೋಚನಾ ಜಿ.ಕೆ. ಭಟ್ ಉಪಸ್ಥಿತರಿದ್ದರು.