www.bantwalnews.com
28,850
ವಿಧಾನಸಭೆಯ ಬಂಟ್ವಾಳ ಕ್ಷೇತ್ರದಲ್ಲಿ ಸೇರ್ಪಡೆಯಾದ ಮತದಾರರ ಸಂಖ್ಯೆ ಇದು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ನಾವೇ ಗೆಲ್ಲುತ್ತೇವೆ ಎಂದು ಆತ್ಮವಿಶ್ವಾಸದಿಂದ ಹೇಳಿಕೊಂಡರೂ ಹೊಸದಾಗಿ ಸೇರ್ಪಡೆಯಾದ ಮತದಾರರು ಮತಕೇಂದ್ರಕ್ಕೆ ಬರುತ್ತಾರೋ, ಬಂದರೂ ಯಾವ ಬಟನ್ ಒತ್ತುತ್ತಾರೆ ಎಂಬುದೇ ಟೆನ್ಶನ್.!!
ಅಷ್ಟರ ಮಟ್ಟಿಗೆ ಈ ಯುವಪಡೆ ನಿರ್ಣಾಯಕ. ಇವರಲ್ಲಿ ಮುಸ್ಲಿಮರು, ಹಿಂದುಗಳು ಎಂಬ ವರ್ಗೀಕರಣ, ಹಿಂದುಗಳಲ್ಲಿ ಬಂಟರು, ಬಿಲ್ಲವರು, ಕುಲಾಲರು ಎಂಬ ಸಮೀಕರಣವೂ ನಡೆಯುತ್ತಿದೆ.
ಮೊದಲು ಎಷ್ಟಿದ್ದರು?
2013ರಲ್ಲಿ ಮತದಾರರ ಸಂಖ್ಯೆ 1,92,884 ಇತ್ತು. ಅವರಲ್ಲಿ 1,56,188 ಮತ ಚಲಾಯಿಸಿದ್ದರು. ಲೆಕ್ಕಾಚಾರ ಹೀಗಿದೆ ನೋಡಿ. ಒಟ್ಟು ಮತಗಳು: 1,92,884 ಚಲಾಯಿತ ಮತಗಳು: 1,56,188 ಶೇಕಡಾವಾರು: 80.98 ಪುರುಷರು: 97,221 ಮಹಿಳೆಯರು 95,662. ಬಿ.ರಮಾನಾಥ ರೈ (ಕಾಂಗ್ರೆಸ್) 81665 (ಶೇ.52.29), ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು (ಬಿಜೆಪಿ) – 63815 (ಶೇ.40.86), ಕೃಷ್ಣಪ್ಪ ಪೂಜಾರಿ ಕಲ್ಲಡ್ಕ(ಜೆಡಿಎಸ್) 1927 (ಶೇ.1.23), ಅಬ್ದುಲ್ ಮಜೀದ್ (ಎಸ್.ಡಿ.ಪಿ.ಐ.) 6113 (ಶೇ.3.91), ಇಬ್ರಾಹಿಂ ಕೈಲಾರ್ (ಕೆಜೆಪಿ) 1157 (ಶೇ.0.74), ಲೋಲಾಕ್ಷ (ಆರ್.ಪಿ.ಐ.) 1511 (ಶೇ.0.97)
ಈಗ ಎಷ್ಟಿದ್ದಾರೆ?
ಈ ಬಾರಿ 2,21,734 ಮಂದಿ ಮತದಾನ ಮಾಡುವ ಅರ್ಹತೆ ಪಡೆದಿದ್ದಾರೆ. ಅಂದರೆ 28,850 ಹೊಸ ಸೇರ್ಪಡೆ. ಬಂಟ್ವಾಳ ಕ್ಷೇತ್ರದಲ್ಲಿ ಈ ಬಾರಿ 1,09,537 ಪುರುಷರು, 1,12,197 ಮಹಿಳೆಯರು ಸೇರಿದಂತೆ 2,21,734 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ರೋಡ್ ಶೋ, ಆಶ್ವಾಸನೆಗಳ ಮಹಾಪೂರ:
ಒಳ್ಳೆಯದಾದರೆ ಎಲ್ಲವನ್ನೂ ತಾನು ಮಾಡಿದ್ದು ಎಂದು ಹೇಳುವುದು, ಉಪಯೋಗಶೂನ್ಯವಾದರೆ, ಅದು ಅವರು ಮಾಡಿದ್ದು ಎಂದು ಹೇಳುವುದು ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರಲ್ಲಿ ಮಾಮೂಲು ವಿಷಯ.. ಪುರಸಭೆಯ ಜಾಗದಲ್ಲಿ ಕಸದ ರಾಶಿ ಕೊಳೆತು ವಾಸನೆ ಬರುತ್ತಿದೆ. . ಕೆಎಸ್ಆರ್ ಟಿಸಿ ಬಸ್ ನಿಲ್ದಾಣಕ್ಕೆ ಪ್ರಯಾಣಿಕರೇ ಬರುವುದಿಲ್ಲ. ಸರ್ವೀಸ್ ರೋಡ್ ಬಿ.ಸಿ.ರೋಡಿನ ಸ್ಟೇಟ್ ಬ್ಯಾಂಕ್ ಹತ್ತಿರ ಪರ್ವತದಂತೆ ಎತ್ತರಕ್ಕಿದೆ. ಬುಧವಾರ ಬೆಳಗ್ಗಿನ ಜಾವ ಧಾರಾಕಾರ ಮಳೆ ಸುರಿದಿದೆ. ಬಿ.ಸಿ.ರೋಡಿನ ಫ್ಲೈ ಓವರ್ ಪಕ್ಕ ಕೆರೆಯಂತೆ ನೀರು ನಿಂತಿದೆ. ಫ್ಲೈಓವರ್ ಮೇಲೆಯೇ ನೀರು ನಿಂತಿದೆ. ವಾಹನಗಳು ಹೋಗುವಾಗ ನೀರು ರಾಚಿ ಕೆಳಕ್ಕೆ ಬೀಳುತ್ತದೆ. ಇಂಥದ್ದಕ್ಕೆಲ್ಲ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ಹೇಳಿದರೆ, ಬಿಜೆಪಿ ಕಾರಣ ಎಂದು ಕಾಂಗ್ರೆಸ್ ಆಪಾದಿಸುತ್ತದೆ. ಹೀಗೆ ಚುನಾವಣೆ ಮುಗಿಯುವವರೆಗೆ ಆಶ್ವಾಸನೆ, ಸಾಧನೆಗಳು, ಬಯ್ಗುಳಗಳು ಯಥೇಚ್ಛವಾಗಿ ಕಾಣಲು ಸಿಗುತ್ತದೆ. ಈ ನಡುವೆ ಗುರುವಾರದವರೆಗೆ ಕಾಂಗ್ರೆಸ್, ಬಿಜೆಪಿ ಪಕ್ಷಗಳು ರೋಡ್ ಶೋ ನಡೆಸಲು ತೀರ್ಮಾನಿಸಿವೆ. ಕಾಂಗ್ರೆಸ್ ನಿಂದ ರಾಜ್ ಬಬ್ಬರ್, ಗುಲಾಂ ನಬಿ ಆಜಾದ್ ಬರಲಿದ್ದರೆ, ಬಿಜೆಪಿಯಿಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬ ರ್ತಾರೆ. ಮುಂದೇನು, ಎಂಬುದನ್ನು ಮೇ. 12ರಂದು ಮತದಾರ ನಿರ್ಧರಿಸುತ್ತಾನೆ.
Harish Mambadyಕಳೆದ 27 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ. Harish Mambady - who has experience working as a Journalist in various Print and Digital Media in Dakshina Kannada, Udupi (Mangalore, Manipal, and Bantwal) for the past 27 years, He Started digital Media www.bantwalnews.com in 2016.