ಕಾಂಗ್ರೆಸ್ ಅಭ್ಯರ್ಥಿ, ಬಂಟ್ವಾಳದಿಂದ ಎಂಟನೇ ಬಾರಿ ಸ್ಪರ್ಧೆಗಿಳಿದಿರುವ ಬಿ.ರಮಾನಾಥ ರೈ ಪರವಾಗಿ ಅವರ ಪತ್ನಿ ಧನಭಾಗ್ಯ ಆರ್. ರೈ ಅವರೂ ಪ್ರಚಾರಕ್ಕಿಳಿದಿದ್ದಾರೆ.
ಬಿ.ಸಿ.ರೋಡಿನ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಸಭೆಯಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡು ಕಾಂಗ್ರೆಸ್ ಪರವಾಗಿ ಮಾತನಾಡಿದರು.
ದೇಶದಲ್ಲಿ ಮಹಿಳೆ ಯಾವತ್ತೂ ದುರ್ಬಲಳಾಗಿರಲು ಸಾಧ್ಯವೇ ಇಲ್ಲ, ಆಕೆ ಎಂದೆಂದಿಗೂ ಸಬಲಳೆ ಆಗಿರುತ್ತಾಳೆ. ಅಂತ ಸಾಬೀತು ಮಾಡಿದ್ದೇ ಕಾಂಗ್ರೆಸ್ ಪಕ್ಷ. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರೇ ಮಹಿಳಾ ಸಬಲೀಕರಣಕ್ಕೆ ಮೂಲ ತಳಹದಿಯಾಗಿದ್ದು ಅದು ಇಂದಿಗೂ ಮುಂದುವರಿಯುತ್ತಲೇ ಬಂದಿದೆ. ಸೋನಿಯಾ ಗಾಂಧಿ ಕೂಡಾ ಮಹಿಳೆಯರ ಬಗ್ಗೆ ಅಪಾರ ನಂಬಿಕೆ, ಗೌರವ ಹೊಂದಿರುವ ಮಹಿಳೆ ಎಂಬುದಕ್ಕೆ ಮಹಿಳೆಯನ್ನು ಈ ದೇಶದ ರಾಷ್ಟ್ರಪತಿಯನ್ನಾಗಿಸಿದ್ದೇ ದೊಡ್ಡ ಪುರಾವೆ. ಪಂಚಾಯತ್ ರಾಜ್ ತಿದ್ದುಪಡಿಯನ್ನು ತಂದಿರುವ ಕಾಂಗ್ರೆಸ್ ಪಕ್ಷಕ್ಕೆ ಈ ದೇಶದ ಎಲ್ಲಾ ಮಹಿಳೆಯರು ಋಣಿಗಳಾಗಬೇಕಾಗಿದೆ. ರಾಜೀವ ಗಾಂಧಿಯವರು ಜ್ಯಾರಿಗೆ ತಂದಿರುವ ಪಂಚಾಯತ್ ರಾಜ್ ಮಸೂದೆಯಿಂದಾಗಿ ಮಹಿಳೆಯರು ಕೂಡಾ ಗ್ರಾಮ ಪಂಚಾಯತ್, ತಾಲೂ ಪಂಚಾಯತ್, ಪಂ. ಮಹಾನಗರ ಪಾಲಿಕೆಗಳವರೆಗೂ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಯನ್ನು ಪಡೆಯುವಂತಾಗಿದೆ ಎಂದು ಧನಭಾಗ್ಯ ರೈ ಹೇಳಿದರು.
ಈ ಸಂದರ್ಭ ರಮಾನಾಥ ರೈ, ಪಕ್ಷ ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ, ಸಂಜೀವ ಪೂಜಾರಿ, ಬಿ.ಎಚ್. ಖಾದರ್, ಮಾಯಿಲಪ್ಪ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.