ಶ್ರದ್ಧಾ ಕೇಂದ್ರದ ಮೇಲೆ ಇರುವಂತಹ ನಿಷ್ಠೆ ರಾಷ್ಟ್ರದ, ವಿಶ್ವದ ಅಭ್ಯುದಯಕ್ಕೆ ಕಾರಣವಾಗುತ್ತದೆ ಎಂದು ಶ್ರೀ ಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಮಂಚಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಇನ್ನೊಬ್ಬರ ಲೋಪದೋಷಗಳನ್ನು ನೋಡುವುದು ಮತ್ತು ಮತ್ಸರ ಪಡುವುದಕ್ಕಿಂತ ಒಳ್ಳೆಯ ಕೆಲಸಗಳಲ್ಲಿ ಒಟ್ಟಾಗಿ ಸೇರಿ ದುಡಿಯೋಣ. ನಮ್ಮ ದೇವಸ್ಥಾನ, ನಮ್ಮ ಸ್ವಾಮಿಜಿ, ನಮ್ಮ ಮಠ ಮಂದಿರಗಳೆಂಬ ಒಗ್ಗಟ್ಟಿರಲಿ ಎಂದು ಸಂದೇಶ ನೀಡಿದರು.
ದೇವಸ್ಥಾನ ಮತ್ತು ಸಂತರನ್ನು ಜಾತಿಗೆ ಸಮಾಜಕ್ಕೆ ಮೀಸಲಾಗಿ ಹೇಳುವುದರಿಂದ ಪ್ರಯೋಜನವಿಲ್ಲ. ಇದು ಭಗವಂತನ ಸಾಮ್ರಾಜ್ಯ. ಈ ಕರ್ಮ ಭೂಮಿಯಲ್ಲಿ ಧನಾತ್ಮಕ ಪ್ರತಿಕ್ರಿಯೆಯ ಪ್ರತೀಕ ಬ್ರಹ್ಮಕಲಶೋತ್ಸವ. ಇಂತಹ ಕೆಲಸದಲ್ಲಿ ತೊಡಗಿಸಿಕೊಳ್ಳದೆ ನತದೃಷ್ಟರಾಗಬೇಡಿ ಎಂದರು.
ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ಕಮಲಾದೇವಿ ಪ್ರಸಾದ ಅಸ್ರಣ್ಣ ವಹಿಸಿ ಮಾತನಾಡಿ ಕೃಷ್ಣನ ಬಗ್ಗೆ ವಿಶೇಷ ಪ್ರೀತಿ ಮತ್ತು ಹೆಚ್ಚು ಭಕ್ತಿ ಯಾಕೆಂದರೆ ಕೃಷ್ಣ ಜನನದಿಂದಲೇ ಸಮಾಜ ಮುಖಿಯಾಗಿದ್ದ. ಗೋವನ್ನು ಬಳಸಿಕೊಂಡಷ್ಟು ನಾವು ಯಾವುದೇ ಪ್ರಾಣಿಯ ಬಳಕೆ ಮಾಡಿಕೊಳ್ಳುವುದಿಲ್ಲ. ಐಸ್‌ಕ್ರೀಂ ತಿಂದಾಗಲೂ ಅದರಲ್ಲಿ ತುಪ್ಪ, ಹಾಲು ಸೇರಿರುವುದೆಂದು ನೆನಪಿಡಬೇಕು ಎಂದರು.
ಚೆಂಡೆ ವಾದ್ಯಗಳ ರಚನೆಗೂ ಗೋವು ಬೇಕು. ಉಳಿದ ಪ್ರಾಣಿಗಳ ಚರ್ಮದಿಂದ ಉತ್ತಮ ನಾದ ಬರಲಾರದು. ದೇವರು ಬಿಂಬ, ನಾವು ಪ್ರತಿಬಿಂಬ -ಶಂಕರಾಚಾರ್‍ಯರೇ ಮೊದಲಾದವರ ಪ್ರತಿಪಾದನೆ, ದೇವರ ಆಲಯ ಸುಸ್ಥಿತಿಯಲ್ಲಿದ್ದರೆ ನಾವು ಸುಸ್ಥಿತಿಯಲ್ಲಿರುತ್ತೇವೆ. ಬ್ರಹ್ಮಕಲಶೋತ್ಸವದಂತಹ ಕಾರ್‍ಯಕ್ರಮಗಳು ಶ್ರೀಮಂತರ ಸಂಪತ್ತಿಗೆ ಹರಿವನ್ನು ನೀಡುತ್ತದೆ. ಹರಿವಿನ ಸದ್ವಿನಿಯೋಗವಾಗುತ್ತದೆ ಎಂದು ವಿವರಿಸಿದರು.
ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಜಿತೇಂದ್ರ ಎಸ್. ಕೊಟ್ಟಾರಿ, ಸಾಲೆತ್ತೂರು ಧಾರ್ಮಿಕ ಮುಖಂಡ ಡಾ| ಶ್ರೀಧರ ಭಟ್ ಮಾವೆ, ಕೊಳ್ನಾಡು ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್, ಕೊಳ್ನಾಡು ತಾ.ಪಂ. ಸದಸ್ಯ ನಾರಾಯಣ ಶೆಟ್ಟಿ ಕುಲ್ಯಾರು, ಜೀರ್ಣೋದ್ದಾರ ಸಮಿತಿ ಪ್ರ.ಕಾರ್ಯದರ್ಶಿ ಪತ್ತುಮುಡಿ ಚಿದಾನಂದ ರಾವ್ ಉಪಸ್ಥಿತರಿದ್ದರು.
ಸುಧಾಕರ ಕೋಟೆ ಕುಂಜಿತ್ತಾಯರು ಗಜ ಗೌರೀ ವ್ರತ ಹರಿಕಥೆ ಕಥಾಭಾಗ ನಡೆಸಿಕೊಟ್ಟರು. ವ್ಯವಸ್ಥಾಪನಾ ಸಮಿತಿ ಸಮಿತಿ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಪ್ರಸ್ತಾವನೆ ನೀಡಿದರು. ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷ ರಾಮಕೃಷ್ಣ ನಾಯಕ್ ಸ್ವಾಗತಿಸಿ, ಜೀರ್ಣೊದ್ಧಾರ ಸಮಿತಿ ಕಾಯಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ವಂದಿಸಿದರು. ರವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.