ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ ತೃಪ್ತಿ ನನಗಿದೆ. ಈ ಬಾರಿಯೂ ಮತದಾರರು ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಗರಿಷ್ಠ ಮತಗಳಿಂದ ಆಶೀರ್ವಾದ ಮಾಡುವ ನಿರೀಕ್ಷೆ, ವಿಶ್ವಾಸ ಇದೆ.
ಹೀಗಂದವರು ಕಾಂಗ್ರೆಸ್ ನ ಬಂಟ್ವಾಳ ಕ್ಷೇತ್ರ ಅಭ್ಯರ್ಥಿ ಬಿ.ರಮಾನಾಥ ರೈ.
ಬಂಟ್ವಾಳದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಪ್ರಚಾರಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏ.27ರಂದು ಬೆಳಗ್ಗೆ 10ಕ್ಕೆ ಬಂಟ್ವಾಳದ ಬಿ.ಸಿ.ರೋಡ್‌ಗೆ ಆಗಮಿಸಲಿದ್ದಾರೆ ಬೆಳಗ್ಗೆ ಹೆಲಿಕಾಫ್ಟರ್ ಮೂಲಕ ಮೊಡಂಕಾಪು ಶಾಲಾ ಮೈದಾನಕ್ಕೆ ಆಗಮಿಸಿ, ನಂತರ ಬಿ.ಸಿ.ರೋಡ್ ಸರ್ಕಲ್ ಸಮೀಪ ಗೋಲ್ಡನ್ ಮೈದಾನದಲ್ಲಿ ನಡೆಯುವ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಸಹಿತ ಇನ್ನಿತರ ರಾಜ್ಯ ಹಾಗೂ ಜಿಲ್ಲಾ ನಾಯಕರು ಭಾಗವಹಿಸುವರು ಎಂದರು.
ರಾಜ್ಯದಲ್ಲಿಯೇ ಬ್ರಹ್ಮಶ್ರೀ ನಾರಾಯಣ ಗುರು ಅವರ ಜಯಂತಿ ಆಚರಿಸುವ ಹೆಮ್ಮೆ ಬಂಟ್ವಾಳದ್ದು. ಧಾರ್ಮಿಕ ಕ್ಷೇತ್ರಗಳಿಗೆ ಗರಿಷ್ಠ ಅನುದಾನವನ್ನು ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ತನ್ನ ಧರ್ಮವನ್ನು ಪ್ರೀತಿಸುವ ಮೂಲಕ ಇತರ ಧರ್ಮವನ್ನು ಗೌರವಿಸುವ ಕೆಲಸ ಮಾಡುತ್ತಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ -ಎಸ್‌ಡಿಪಿಐ ಮೈತ್ರಿಯ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ. ಮೈತ್ರಿ ಹಾಗು ಬೆಂಬಲದ ಬಗ್ಗೆ ಪಕ್ಷದ ವರಿಷ್ಠರು ಯಾವುದೇ ಸೂಚನೆ ನೀಡಿಲ್ಲ. ಜಾತ್ಯತೀತ ಪಕ್ಷಕ್ಕೆ ಬೆಂಬಲ ನೀಡುವುದು ಅವರವರ ಅಭಿಪ್ರಾಯ ಎಂದ ಅವರು, ಈ ಬಗ್ಗೆ ಹೆಚ್ಚು ಮಾತನಾಡಲು ಇಚ್ಛಿಸುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜಶೇಖರ್ ಕೋಟ್ಯಾನ್, ಪ್ರಚಾರ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ ಬೊಳ್ಳಾಯಿ, ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷರಾದ ಅಬ್ಬಾಸ್ ಅಲಿ, ಮಾಯಿಲಪ್ಪ ಸಾಲಿಯಾನ್, ಪ್ರಮುಖರಾದ ಬಿ.ಎಚ್.ಖಾದರ್, ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಮಾಧವ ಮಾವೆ, ಬೇಬಿ ಕುಂದರ್, ಬಾಲಕೃಷ್ಣ ಆಳ್ವ, ಸುದರ್ಶನ್ ಜೈನ್, ಮಂಜುಳ ಮಾವೆ, ಜಯಂತಿ ಪೂಜಾರಿ, ಪರವೇಶ್ವರ, ಮಧುಸೂದನ್ ಶೆಣೈ ಮತ್ತಿತರರು ಇದ್ದರು.