ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಬಂಟ್ವಾಳವನ್ನು ಬಿಜೆಪಿ ಗೆದ್ದರೆ ಉಳಿದ ಏಳು ಸ್ಥಾನಗಳನ್ನೂ ಗೆದ್ದಂತೆ. ರಾಜ್ಯ ಮಟ್ಟದಲ್ಲಿ ಬಿಜೆಪಿ ಬಂಟ್ವಾಳದ ವಿಜಯದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದು, ಬಂಟ್ವಾಳ ಗೆದ್ದರೆ ಜಿಲ್ಲೆ ಮಾತ್ರವಲ್ಲ, ಕರ್ನಾಟಕವೇ ಗೆದ್ದಂತೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬಂಟ್ವಾಳದ ಸ್ಪರ್ಶ ಕಲಾಮಂದಿರದಲ್ಲಿ ಬಿಜೆಪಿಯ ಬಂಟ್ವಾಳ ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಚುನಾವಣಾ ನಾಮಪತ್ರ ಸಲ್ಲಿಕೆಯ ಪೂರ್ವಭಾವಿಯಾಗಿ ಶುಕ್ರವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ವಿಧಾನಸಭೆ ಪ್ರವೇಶಿಸಿದರೆ, ರಮಾನಾಥ ರೈ ಮನೆಯಲ್ಲಿ ಕುಳಿತುಕೊಳ್ಳುವ ಕಾಲ ಬಂದಿದೆ. ನೀವು ಮತೀಯ ಭಾವನೆ ಕೆರಳಿಸಿದಿರಿ, ಹಿಂದು ಮುಸಲ್ಮಾನರ ನಡುವೆ ಒಡಕು ಮೂಡಿಸಿದಿರಿ ಎಂದು ರೈ ಕುರಿತು ಹೇಳಿದ ಅವರು, ರಮಾನಾಥ ರೈ ಅವಯಲ್ಲಿ ಹತ್ಯೆಗಳು ನಡೆದವು, ಜೈಲಿನಲ್ಲಿ ದಾಳಿ ನಡೆಯಿತು, ಜನರು ೩೦ ವರ್ಷ ಅಭಿವೃದ್ಧಿಯನ್ನು ಹೊಂದದೆ ಉಪವಾಸ ಬಿದ್ದರೆ, ರಮಾನಾಥ ರೈ ಯಾವುದೇ ಅಭಿವೃದ್ಧಿ ಮಾಡದೆ ಬಿಜೆಪಿಯವರು ಒದಗಿಸಿದ ಆಸ್ಪತ್ರೆ, ಪಾಲಿಟೆಕ್ನಿಕ್, ಅಗ್ನಿಶಾಮಕ ಇಲಾಖೆ, ಪದವಿ ಕಾಲೇಜು, ಏತ ನೀರಾವರಿ ನ್ಯಾಯಾಲಯ ಕಟ್ಟಡ, ಬಸ್ ನಿಲ್ದಾಣವನ್ನು ನಾವು ಮಾಡಿದ್ದು ಎಂದರು. ಮಂತ್ರಿಯಾಗಿ, ಶಾಸಕರಾಗಿ ರಮಾನಾಥ ರೈ ಸಂಪೂರ್ಣ ವಿಫಲರಾಗಿದ್ದಾರೆ ಎಂದ ನಳಿನ್, ಈ ಬಾರಿ ಭಾರತೀಯ ಜನತಾ ಪಾರ್ಟಿ ಅಭೂತಪೂರ್ವ ಜಯ ಗಳಿಸಲಿದೆ ಎಂದು ನಳಿನ್ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಕಾಂಗ್ರೆಸ್ ನ ಪ್ರಮುಖ ನಾಯಕರು ಇದೇ ಜನಾರ್ದನ ಪೂಜಾರಿ ಮನೆ ಬಳಿಬಾರಿ ಓಡಾಡಿದರೂ ಪೂಜಾರಿಯವರ ನೆನಪಾಗಲಿಲ್ಲ, ಕಾಂಗ್ರೆಸ್ ಸಮಾವೇಶ ನಡೆಸಿದಾಗಲೂ ಜನಾರ್ದನ ಪೂಜಾರಿ ನೆನಪಾಗಲಿಲ್ಲ. ಆದರೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ಪೂಜಾರಿ ಮನೆ ಭೇಟಿಗಳು ನಡೆಯುತ್ತಿವೆ ಎಂದರು.
ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅಕಾರಕ್ಕೆ ಬರಬೇಕಾಗಿದ್ದು, ಬಂಟ್ವಾಳದಲ್ಲೂ ಗೆಲ್ಲಿಸಬೇಕಾಗಿದೆ. ಗೆದ್ದರೆ ರಾಜಧರ್ಮ ಪಾಲಿಸುತ್ತೇನೆ, ಪಕ್ಷದ ಕಾರ್ಯಕರ್ತರಿಗೆ ಆದ ಅನ್ಯಾಯ ಸರಿಪಡಿಸುತ್ತೇನೆ ಎಂದರು.
ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್ ಮಾತನಾಡಿ, ಸಿದ್ದರಾಮಯ್ಯ ದುರಹಂಕಾರ ಮತ್ತು ದರ್ಪದ ಆಡಳಿತ ನಡೆಸಿದ್ದಾರೆ. ಕಲ್ಲಡ್ಕ ಶಾಲೆ ಅನ್ನ ಕಸಿದದ್ದು, ಹತ್ಯೆಗಳು ಇದಕ್ಕೆ ಉದಾಹರಣೆ, ರಾಜೇಶ್ ನಾಯ್ಕ್ ಅವರ ಕೃಷಿ ಸೇವೆ ರಾಜ್ಯಕ್ಕೆ ಮಾದರಿ ಎಂದರು. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪ್ರಮುಖರಾದ ಮೋನಪ್ಪ ಭಂಡಾರಿ, ಪದ್ಮನಾಭ ಕೊಟ್ಟಾರಿ, ಜಿ.ಆನಂದ, ಜಿತೇಂದ್ರ ಕೊಟ್ಟಾರಿ, ಕಮಲಾಕ್ಷಿ ಪೂಜಾರಿ, ಸುಲೋಚನಾ ಭಟ್, ಸುಗುಣ ಕಿಣಿ, ತುಂಗಪ್ಪ ಬಂಗೇರ, ಕೇರಳ ಬಿಜೆಪಿ ಮುಖಂಡ ಕೆ.ಸುರೇಂದ್ರನ್, ಬೃಜೇಶ್ ಚೌಟ ಉಪಸ್ಥಿತರಿದ್ದರು. ಮೋನಪ್ಪ ದೇವಸ್ಯ ವಂದಿಸಿದರು. ರಾಮದಾಸ ಬಂಟ್ವಾಳ ಕಾರ್ಯಕ್ರಮ ನಿರ್ವಹಿಸಿದರು. ಕ್ಷೇತ್ರ ಅಧ್ಯಕ್ಷ ದೇವದಾಸ ಶೆಟ್ಟಿ ಸ್ವಾಗತಿಸಿದರು. ಇದಕ್ಕೂ ಮುನ್ನ ಪೊಳಲಿಯಿಂದ ಬಿ.ಸಿ.ರೋಡಿನವರೆಗೆ ಕಾಲ್ನಡಿಗೆಯಲ್ಲಿ ರಾಜೇಶ್ ನಾಯ್ಕ್ ಆಗಮಿಸಿದರು.