ಜನರ ಸೇವೆಯ ಹಿತದೃಷ್ಟಿಯಿಂದ ನಿಮಿಷವನ್ನು ನಾನು ಹಾಳು ಮಾಡಿಲ್ಲ. ಅಪಪ್ರಚಾರಗಳಿಗೆ ಎಂದಿಗೂ ಎದೆ ಗುಂದುವುದಿಲ್ಲ ಮತನೀಡುವ ಮೂಲಕ ಆಶೀರ್ವದಿಸಿ. ಕಳೆದ ಬಾರಿಗಿಂತ ಎರಡು ಪಟ್ಟು ಹೆಚ್ಚು ಜನಸೇವೆ, ಕೆಲಸ ಮಾಡಿಕೊಡುವೆ ಹೀಗೆಂದು ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂಟನೇ ಬಾರಿ ಸ್ಪರ್ಧೆಗಿಳಿದಿರುವ ಬಿ.ರಮಾನಾಥ ರೈ ಕಾರ್ಯಕರ್ತರ, ಅಭಿಮಾನಿಗಳ ಸಭೆಯಲ್ಲಿ ಮನವಿ ಮಾಡಿದರು.
ಗುರುವಾರ ಬಂಟ್ವಾಳದ ಮಿನಿ ವಿಧಾನಸೌಧದಲ್ಲಿರುವ ಚುನಾವಣಾ ಕಚೇರಿಗೆ ನಾಮಪತ್ರ ಸಲ್ಲಿಸುವ ಮುನ್ನ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದವರು ನಾನು ಕೇವಲ ಬಂಟ್ವಾಳ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿದೆ ಎನ್ನುತ್ತಾರೆ, ಆದರೆ ಬಂಟ್ವಾಳದಲ್ಲಿ ಅಭಿವೃದ್ಧಿ ಶೂನ್ಯ ಎನ್ನುತ್ತಾರೆ ಎಂದರು. ತಾನು ಆಸ್ಕರ್ ಫೆರ್ನಾಂಡೀಸ್, ಜನಾರ್ದನ ಪೂಜಾರಿ ಗೆಲುವಿಗೆ ಹಗಲಿರುಳು ಶ್ರಮಿಸಿದ್ದನ್ನು ನೆನಪಿಸಿದ ರೈ, ಪಕ್ಷವೇ ನನ್ನ ಧರ್ಮ, ಕಾಂಗ್ರೆಸ್ ನಲ್ಲಿ ಅಭ್ಯರ್ಥಿ ಘೋಷಣೆ ಆದ ಬಳಿಕ ಟಿಕೆಟ್ ಗೆ ಪೈಪೋಟಿಯನ್ನು ನಿಲ್ಲಿಸಬೇಕು, ನೋವು ಮರೆತು ಪಕ್ಷ ಗೆಲ್ಲಿಸುವ ಕಾರ್ಯ ಮಾಡಬೇಕು ಪಕ್ಷ ಯಾವತ್ತೂ ನಿಷ್ಠಾವಂತ ಕಾರ್ಯಕರ್ತರಿಗೆ ಪಕ್ಷ ದ್ರೋಹ ಮಾಡುವುದಿಲ್ಲ ಎಂದು ಸಮಾಧಾನ ಹೇಳಿದರು.
ರಾಜ್ಯ ಕೆಪಿಸಿಸಿ ಉಸ್ತುವಾರಿ ಯು. ಬಿ. ವೆಂಕಟೇಶ್, ಡಿಸಿಸಿ ಅಧ್ಯಕ್ಷರಾದ ಹರೀಶ್ ಕುಮಾರ್, ವಕ್ಫ್ ಅಧ್ಯಕ್ಷರಾದ ಕಣಚೂರು ಮೋನು, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಿ.ಎಚ್.ಖಾದರ್, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ. ಎಸ್. ಮಹಮ್ಮದ್, ಪದ್ಮಶೇಖರ್ ಜೈನ್, ಮಂಜುಳಾ ಮಾಧವ್ ಮಾವೆ, ಮಮತಾ ಗಟ್ಟಿ, ಕೆಪಿಸಿಸಿ ಕಾರ್ಯದರ್ಶಿ ರಾಜಶೇಖರ್ ಕೋಟ್ಯಾನ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾದ ಅಬ್ಬಾಸ್ ಅಲಿ, ಬಂಟ್ವಾಳ ಬ್ಲಾಕ್ ಅಧ್ಯಕ್ಷರಾದ ಮಾಯಿಲಪ್ಪ ಸಾಲ್ಯಾನ್, ಡಿಸಿಸಿ ಉಪಾಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಸಾಮಾಜಿಕ ಜಾಲತಾಣ ಘಟಕದ ಸಂಚಾಲಕರಾದ ನಿತ್ಯಾನಂದ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷರಾದ ಸಂಜೀವ್ ಪೂಜಾರಿ, ಬಾಲಕೃಷ್ಣ ಆಳ್ವ, ಜಗದೀಶ್ ಕೊಯಿಲ, ರಾಮಕೃಷ್ಣ ಆಳ್ವ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.