ಭಾರತದ ಮೇಲೆ ನಡೆಯುತ್ತಿರುವ ಸಾಂಸ್ಕೃತಿಕ ಆಕ್ರಮಣವನ್ನು ಎದುರಿಸಲು ಬೇಕಾದ ಮನೋಭಾವ ನಮ್ಮಲ್ಲಿ ತಯಾರಾಗಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ೨೦೧೭–೧೮ನೇ ಸಾಲಿನ ದೀಪಪ್ರದಾನ ಕಾರ್ಯಕ್ರಮದಲ್ಲಿ ಪದವಿ ವಿಭಾಗದ ೭ನೇ ತಂಡದ ಬೀಳ್ಕೊಡುಗೆ ಸಂದರ್ಭದಲ್ಲಿ ಮಾತನಾಡಿದ ಅವರು, ಒಳ್ಳೆಯವರಾಗುವುದು ಮತ್ತು ಒಳ್ಳೆಯದನ್ನು ಮಾಡುವುದೇ ಧರ್ಮ ಎಂದು ವಿವೇಕಾನಂದರು ಹೇಳಿದ ಮಾತು ಇಲ್ಲಿ ಅಕ್ಷರಶಃ ಸತ್ಯವಾಗಿದೆ. ಭಾರತದ ಶ್ರೇಷ್ಠತೆ ವಿದೇಶಿಯರಿಗೆ ಗೊತ್ತು. ದುರಂತವೆಂದರೆ ನಮ್ಮ ದೇಶದವರಿಗೆ ತಿಳಿದಿಲ್ಲ. ದೇಶ ಶ್ರೇಷ್ಠವೆನ್ನುವ ಭಾವನೆ ಶಿಕ್ಷಣದ ಮೂಲಕ ದೊರೆಯಬೇಕು ಎಂದರು.
ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಕಾರ್ಯಾಧ್ಯಕ್ಷ ಡಾ| ಶಿವ ಎಂ ಮೂಡಿಗೆರೆ, ಕಾಸರಗೋಡು ಕೃಷಿ ವಿಜ್ಞಾನ ಕೇಂದ್ರ ಮುಖ್ಯ ತಾಂತ್ರಿಕ ಅಧಿಕಾರಿ ಡಾ| ಸರಿತಾ ರೈ, ನಿವೃತ್ತ ಹಿರಿಯ ವೈದ್ಯರಾದ ಡಾ| ಸುಜಾತ, ಹೋಟೇಲ್ ಶ್ರೀ ಪಂಜುರ್ಲಿ ಹುಬ್ಬಳ್ಳಿ ಮಾಲಕರಾದ ರಾಜೇಂದ್ರ ಶೆಟ್ಟಿ, ಪಾಲ್ಗೊಂಡಿದ್ದರು.
ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಶಿಧರ ಮಾರ್ಲ, ಡಾ| ಕಮಲಾ ಪ್ರಭಾಕರ ಭಟ್, ಉಪಸ್ಥಿತರಿದ್ದರು.
ಈ ಸಂದರ್ಭ ಅಂತಿಮ ವರ್ಷದ ವಿದ್ಯಾರ್ಥಿಗಳು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ದೀಪವನ್ನು ಹಸ್ತಾಂತರಿಸಿ ತಮ್ಮ ೩ ವರ್ಷದ ವಿದ್ಯಾರ್ಥಿ ಜೀವನದ ನೋವು ನಲಿವುಗಳನ್ನು ಹಂಚಿಕೊಂಡರು. ಹಾಗೆಯೇ ಅವರ ಸವಿ ನೆನಪಿಗಾಗಿ ಕಾಲೇಜಿಗೆ ಕೊಡುಗೆಯನ್ನು ನೀಡಿದರು.
ಕಾರ್ಯಕ್ರಮವನ್ನು ಉಪನ್ಯಾಸಕಿ ಜಯಲಕ್ಷ್ಮೀ ನಿರೂಪಿಸಿ, ಪದವಿ ಪ್ರಾಚಾರ್ಯ ಕೃಷ್ಣಪ್ರಸಾದ ಕಾಯರ್ಕಟ್ಟೆ ಸ್ವಾಗತಿಸಿ, ದ್ವಿತೀಯ ವರ್ಷದ ವಿದ್ಯಾರ್ಥಿ ಸಂತೋಷ್ ವಂದಿಸಿದರು.