www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ನೀರಿನ ಸಮಸ್ಯೆ ಬಿ.ಸಿ.ರೋಡಿನಲ್ಲಿ ಬಿಗಡಾಯಿಸಿದೆ. ಶನಿವಾರದಿಂದ ಗುರುವಾರದವರೆಗೆ ಆರು ದಿನಗಳ ಕಾಲ ನೀರಿಲ್ಲದೆ ಜನರು ಪರದಾಡಿದ್ದಾರೆ. ಬೋರ್ ವೆಲ್, ಸಂಪ್ ಇದ್ದವರಿಗೆ ಅದರ ಬಿಸಿ ಗೊತ್ತಾಗಿಲ್ಲ. ಆದರೆ ಉಳಿದವರು ಬೆವರು ಹರಿಸಿದ್ದೇ ಬಂತು, ನೀರಿಲ್ಲ.
ಬಿ.ಸಿ.ರೋಡಿನಲ್ಲಿ ಈ ರೀತಿಯ ನೀರಿನ ಸಮಸ್ಯೆ ಉದ್ಭವವಾಗಿ ಕೆಲವು ವರ್ಷಗಳೇ ಸಂದವು. ಪೈಪ್ ಲೈನ್ ನಲ್ಲಿ ಸೋರಿಕೆಯಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ಅಧಿಕಾರಗಳು ತಿಳಿಸಿದ್ದಾರೆ. ಮುನ್ಸಿಪಾಲಿಟಿಯಿಂದ ಟ್ಯಾಂಕರುಗಳಲ್ಲಿ ನೀರು ಸರಬರಾಜು ಅಗತ್ಯವಿದ್ದೆಡೆ ಮಾಡಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಮುನ್ಸಿಪಾಲಿಟಿಯಿಂದ ನೀರು ಸರಬರಾಜು ಮಾಡುವ ಹಳೇ ಪೈಪ್ ಲೈನಿನಲ್ಲಿ ಯಾವುದೋ ಒಂದು ಕಡೆ ಸೋರಿಕೆಯಾಗಿ ಎಲ್ಲಿಗೆ ಪೂರೈಕೆಯಾಗಬೇಕಿತ್ತೋ ಅಲ್ಲಿಗೆ ನೀರು ಬರುವುದು ನಿಂತು ಹೋಯಿತು. ಆದರೆ ಸಮಸ್ಯೆ ಎಲ್ಲಿ ಎಂಬ ಹುಡುಕಾಟಕ್ಕೆ ನಾಲ್ಕು ದಿನಗಳು ಬೇಕಾದವು. ಕೊನೆಗೂ ಫ್ಲೈ ಓವರ್ ಪಕ್ಕದ ಭಾಗದಲ್ಲಿ ತೊಂದರೆ ಇರುವುದಾಗಿ ಪತ್ತೆಹಚ್ಚಿದ್ದಾರೆ ಅಧಿಕಾರಿಗಳು.
ಗೂಡಿನಬಳಿಯಲ್ಲಿರುವ ನೆಲಮಟ್ಟದ ಸಂಗ್ರಹಾಗಾರದಿಂದ ಬಿ.ಸಿ.ರೋಡಿಗೆ ನೀರು ಪುರಸಭೆಯ ಪೈಪ್ ಲೈನಿನಲ್ಲಿ ಸರಬರಾಜಾಗುತ್ತಿದೆ. ಅಲ್ಲಿಂದ ಅದು ಕೈಕಂಬದ ಕಡೆಗೆ ಸಾಗುತ್ತದೆ. ಆದರೆ ಬಿ.ಸಿ.ರೋಡಿನಲ್ಲಿ ಪೈಪ್ ಲೈನ್ ನಲ್ಲಿ ಸಮಸ್ಯೆ ಇರುವ ಕಾರಣ, ಹಳೇ ಪೈಪು ಲೈನ್ ದುರಸ್ತಿ ಮಾಡುವ ಕಾರಣದಿಂದ ಹೊಸದಾಗಿ ಒಳಚರಂಡಿ ಮಂಡಳಿ ಹಾಕಿದ ಪೈಪುಲೈನ್ ಗಳ ಸಹಾಯದಿಂದ ನೀರು ಸರಬರಾಜು ಮಾಡುವುದು ಎಂದು ತೀರ್ಮಾನಿಸಲಾಯಿತು. ಇಷ್ಟರವರೆಗೆ ಹಳೇ ಪೈಪುಲೈನುಗಳಲ್ಲಿ ನೀರು ಸಾಗಿಸುತ್ತಿದ್ದು, ಇದೀಗ ಕ.ನ.ನೀ.ಸ.ಒ.ಮಂಡಳಿಯ ಹೊಸ ಪೈಪುಲೈನುಗಳಲ್ಲಿ ನೀರು ಸರಬರಾಜು ಮಾಡಲಾಯಿತು. ಬಿ.ಸಿ.ರೋಡಿನ ವಿಜಯಾ ಬ್ಯಾಂಕಿನ ಬಳಿ ಮತ್ತೆ ಹಳೇ ಪೈಪುಲೈನ್ (ಪುರಸಭೆಯದ್ದು) ಗೆ ಅದನ್ನು ಲಿಂಕ್ ಮಾಡುವ ಕಾರ್ಯ ನಡೆಸಲಾಗುತ್ತಿದೆ. ಗುರುವಾರ ರಾತ್ರಿ ಇನ್ನೂ ಬಾಕಿ ಇದೆ. ಶುಕ್ರವಾರ ಬೆಳಗ್ಗೆ ನಲ್ಲಿಗಳಲ್ಲಿ ನೀರು ಹರಿಯುತ್ತದೋ ನೋಡಬೇಕು…!!!