www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಇದು ಅಗಲಕಿರಿದಾದ, ಇನ್ನೂ ಸಮರ್ಪಕವಾಗಿ ನಿರ್ಮಾಣ ಮುಗಿಯದ ಸರ್ವೀಸ್ ರಸ್ತೆಯ ಮುಗಿಯದ ಕತೆ.
ಮಂಗಳವಾರ ಮಧ್ಯಾಹ್ನದ ವೇಳೆಗೆ ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಸರಕಾರಿ ಬಸ್ಸಿನ ಒಳಗೆ ಅದೇ ಬಸ್ಸಿನ ಪಕ್ಕ ಇದ್ದ ತೆರೆದ ವಾಹನದಲ್ಲಿದ್ದ ಕಬ್ಬಿಣದ ಕಂಬವೊಂದು ಹೋಗಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.
ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹೆದ್ದಾರಿ ಇಲಾಖೆ ವರ ವತಿಯಿಂದ ಬೀದಿ ದೀಪ ಅಳವಡಿಸಲು ಕಬ್ಬಿಣದ ಕಂಬವನ್ನು ಟ್ರಾಕ್ಟರ್ ನಲ್ಲಿ ಸರ್ವೀಸ್ ರಸ್ತೆಯ ಮೂಲಕ ಕೊಂಡು ಹೋಗುತ್ತಿದ್ದ ವೇಳೆ ಸರಕಾರಿ ಬಸ್ ಕಿಟಕಿ ಯ ಒಳಗೆ ಕಂಬ ಬಿದ್ದಿದೆ. ಆದರೆ ಕಂಬ ಬಿದ್ದಿರುವ ಕಿಟಕಿ ಯ ಸೀಟಿನಲ್ಲಿ ಪ್ರಯಾಣಿಕರು ಇಲ್ಲದ ಕಾರಣ ಯಾವುದೇ ಅನಾಹುತಗಳು ನಡೆದಿಲ್ಲ. ಬೇಜವಾಬ್ದಾರಿಯಾಗಿ ಕಂಬಗಳನ್ನು ಸಾಗಿಸುವವರನ್ನು ಸ್ಥಳೀಯ ರು ತರಾಟೆಗೆ ತೆಗೆದುಕೊಂಡರು.
ಇನ್ನಷ್ಟು ಅಪಾಯ ಸಾಧ್ಯತೆ:
ಬಿ.ಸಿ.ರೋಡಿನ ಸರ್ವೀಸ್ ರಸ್ತೆ ಅಗಲಕಿರಿದಾಗಿದ್ದು, ಫುಟ್ ಪಾತ್ ಕೂಡ ನಿರ್ಮಾಣವಾಗಿಲ್ಲ. ಅಸಲಿಗೆ ಇದು ಘನ ವಾಹನ ಸಂಚಾರಕ್ಕೆ ಅನ್ ಫಿಟ್ ಎಂಬ ಮಾತುಗಳು ಕೇಳಿಬರುತ್ತಿರುವಾಗಲೇ ಖಾಸಗಿ ಬಸ್ಸುಗಳು ಸರ್ವೀಸ್ ರಸ್ತೆಯಲ್ಲಿ ಸಂಚರಿಸಲು ಆರಂಭಿಸಿದವು. ಇದರ ಬೆನ್ನಿಗೇ ಸರಕಾರಿ ಬಸ್ಸುಗಳು ಬಂದವು. ಮೊದಲಿನಂತೆಯೇ ಖಾಸಗಿ ಬಸ್ ನಿಲ್ದಾಣ ನಿರ್ಮಾಣವಾಗುವ ಜಾಗದಲ್ಲಿ ಬಸ್ಸುಗಳು ಸಾಲಾಗಿ ನಿಲ್ಲಲು ಆರಂಭಗೊಂಡು ಟ್ರಾಫಿಕ್ ಜಾಮ್ ಆರಂಭಗೊಂಡಿದ್ದವು.
ಈಗ ಘಟನೆ ನಡೆದಿರುವ ಜಾಗದಲ್ಲಿ ಬಸ್ಸುಗಳಷ್ಟೇ ಅಲ್ಲ, ಕಿರು ವಾಹನಗಳು, ದ್ವಿಚಕ್ರ ವಾಹನಗಳೂ ಸಂಚರಿಸುತ್ತವೆ. ಅಲ್ಲೇ ವಾಹನಗಳ ಪಾರ್ಕಿಂಗ್ ಮಾಡಲಾಗುತ್ತಿದೆ. ಇದರಿಂದಾಗಿ ಮತ್ತಷ್ಟು ಸಮಸ್ಯೆ ಉದ್ಭವವಾಗುತ್ತಿದೆ. ಅಂಗಡಿಗೆ ಬಂದ ವಾಹನಗಳು ನಿಲ್ಲಿಸುವುದಷ್ಟೇ ಅಲ್ಲ, ಬೇರೆಲ್ಲೋ ಹೋಗುವವರೂ ಅಲ್ಲೇ ಪಾರ್ಕಿಂಗ್ ಮಾಡಿ ತೆರಳುವುದುಂಟು. ಹೀಗಾಗಿ ಸರ್ವೀಸ್ ರಸ್ತೆ ಬಹೂಪಯೋಗಿ ಆದಂತಿದೆ. ಅರ್ಧಂಬರ್ಧ ನಿರ್ಮಾಣಗೊಂಡ ಈ ರಸ್ತೆಯಲ್ಲಿ ಜೋರಾಗಿ ಮಳೆ ಬಂದರೆ ನೀರು ನಿಲ್ಲುತ್ತದೆ. ಘನ ವಾಹನಗಳು ಸಂಚರಿಸಿದರೆ, ಸೈಡ್ ಕೊಡಲೂ ಅಸಾಧ್ಯವಾದ ಪರಿಸ್ಥಿತಿ ಇದೆ. ಸಂಪೂರ್ಣವಾಗಿ ನಿರ್ಮಾಣವಾಗದೆ ಸಂಚಾರಮುಕ್ತಗೊಳಿಸಿದ ವ್ಯವಸ್ಥೆಯ ವೈಖರಿಯನ್ನು ಜನರು ಪ್ರಶ್ನಿಸುವಂತಾಗಿದೆ.