ಬಂಟ್ವಾಳ

ಅಪರಾಧ ಚಟುವಟಿಕೆ ನಿಯಂತ್ರಣದಲ್ಲಿ: ಬಂಟ್ವಾಳ ಸರ್ಕಲ್ ಇನ್ಸ್ ಪೆಕ್ಟರ್ ಪ್ರಕಾಶ್

ಸದ್ಯಕ್ಕಂತೂ ಬಂಟ್ವಾಳ ತಾಲೂಕಿನಲ್ಲಿ ಅಪರಾಧ ಚಟುವಟಿಕೆ ನಿಯಂತ್ರಣದಲ್ಲಿದೆ, ಇದು ಹೀಗೆಯೇ ಮುಂದುವರಿಯಲು ಇಲಾಖೆಯೊಂದಿಗೆ ಸಹಕರಿಸಿ ಎಂದು ಸಾರ್ವಜನಿಕರಿಗೆ ಬಂಟ್ವಾಳ ವೃತ್ತನಿರೀಕ್ಷಕ ಪ್ರಕಾಶ್ ಮನವಿ ಮಾಡಿದ್ದಾರೆ.

ಬಂಟ್ವಾಳ ಶ್ರಿ ತಿರುಮಲ ವೆಂಕಟರಮಣ ದೇವಳದ ಸಭಾಂಗಣದಲ್ಲಿ ಬಿ.ಕಸ್ಬಾ ಗ್ರಾಮದ ಪೊಲೀಸ್ ಬೀಟ್ ಸಭೆಯಲ್ಲಿ ಅವರು ಮಾತನಾಡಿದರು.

ಬಂಟ್ವಾಳದಲ್ಲಿ ಶಾಂತಿಯ ವಾತಾವರಣ ಈಗಿದ್ದು, ಇದಕ್ಕೆ ಸಾರ್ವಜನಿಕರ ಕೊಡುಗೆ ಬಹಳ ಮುಖ್ಯವಾಗಿದೆ ಎಂದ ಅವರು, ಹಾಗೆಂದು ಎಚ್ಚರಿಕೆಯಿಂದ ಇರುವುದೂ ಮುಖ್ಯ. ನಗರ ವ್ಯಾಪ್ತಿಯಲ್ಲಿ  ಎಲ್ಲಾ ಅಂಗಡಿ ಮುಂಗಟ್ಟು,ದೇವಸ್ಥಾನಗಳಿಗೂ ಕಾವಲುಗಾರನನ್ನು ನೇಮಿಸಿ ಸುರಕ್ಷತೆಯನ್ನು ಕಾಪಾಡಿಕೊಳ್ಳುತ್ತಿರುವುದು ಶ್ಲಾಘನೀಯ. ನಾಗರಿಕರು ಮನೆ ಬಿಟ್ಟು ದೂರ ಹೋಗುವ ಸಂದರ್ಭ ನಗದು, ಒಡವೆಯನ್ನು ಬ್ಯಾಂಕ್ ಲಾಕರ್ ನಲ್ಲಿರಿಸಬೇಕು, ಯಾವುದೇ ಅವಘಡಗಳು ಸಂಭವಿಸಿದಾಗ ಅಥವಾ ಮನೆಗೆ ಬೀಗ ಹಾಕಿ ದೂರದೂರಿಗೆ ಪ್ರವಾಸ ಮಾಡುವಾಗ ತಮ್ಮ ಗ್ರಾಮದ  ಬೀಟ್ ಪೊಲೀಸ್  ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದರು.

ಮುಂದಿನ ತಿಂಗಳು ರಾಜ್ಯ ವಿಧಾನಸಭೆಗೆ ಚುನಾವಣೆಯು ನಡೆಯಲಿದ್ದು, ಆರ್ಹತೆ ಹೊಂದಿರುವ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಬೇಕು ಎಂದು ಕರೆ ನೀಡಿದರು. ಚುನಾವಣಾ ಸಂದರ್ಭ ಯಾವುದೇ  ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನಾಗರಿಕರು ಪೊಲೀಸ್ ಇಲಾಖೆಯೊಂದಿಗೆ  ಕೈ ಜೋಡಿಸಬೇಕು ಎಂದು ತಿಳಿಸಿದರು. ‌

ಬಂಟ್ವಾಳ ನಗರ ಠಾಣಾ ಉಪನಿರೀಕ್ಷಕ ಚಂದ್ರಶೇಖರ್ ಮಾತನಾಡಿ, ಬೀಟ್ ಸಿಬ್ಬಂದಿಗೆ ಹೆಚ್ಚುವರಿ‌ ಗ್ರಾಮಗಳನ್ನು  ಹಂಚಿಕೆ ಮಾಡಲಾಗಿದೆ. ಗ್ರಾಮದಲ್ಲಾಗುವ ಪ್ರತಿಯೊಂದು ಅಗು-ಹೋಗುಗಳ ಕುರಿತ ಮಾಹಿತಿಯನ್ನು ಬೀಟ್ ಪೊಲೀಸರಿಗೆ ನೀಡಿದಾಗ ಜನರ ಗ್ರಾಮದಲ್ಲಿ ಶಾಂತಿ ,ಸೌಹಾರ್ದತೆಯನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದರು.

ಮೇ ತಿಂಗಳಲ್ಲಿ   ನಡೆಯುವ ಚುನಾವಣೆಯಲ್ಲಿ ಮತದಾರರು ರಾಜಕೀಯ ಪಕ್ಷಗಳ ನಾಯಕರ ಒತ್ತಡ,ಅಮೀಷಕ್ಕೊಳಗಾಗದೆ ಸ್ವಯಂ ಪ್ರೇರಿತವಾಗಿ ಮತಚಲಾಯಿಸಬೇಕು, ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಬಗ್ಗೆ ಮತ ಚಲಾಯಿಸಲು ಆಸಕ್ತಿ ಇಲ್ಲ ಎಂದಾದರೆ ನೋಟಾ ಮತ ಚಲಾವಣೆಗೂ ಅವಕಾಶವಿದ್ದು,ಒಟ್ಟಾರೆ ಮತದಾರ ತಮ್ಮ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಬೇಕು ಎಂದರು.

ಅಪರಾಧ ವಿಭಾಗದ ಎಸ್.ಐ.ಹರೀಶ್ ಉಪಸ್ಥಿತರಿದ್ದರು.ಪುರಸಭೆಯ ನಾಮನಿರ್ದೇಶಿತ ಸದಸ್ಯ ಪ್ರವೀಣ್ ಕಿಣಿ, ಉದ್ಯಮಿ ಸುರೇಶ್ ಬಾಳಿಗ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಬೀಟ್ ಸಿಬ್ಬಂದಿಗಳಾದ ಮುರುಗೇಶ್,  ಕೃಷ್ಣ,  ಸುರೇಶ್, ವಿಶಾಲಾಕ್ಷೀ, ಧನ್ಯಶ್ರೀ ಮತ್ತು ರಾಘವೇಂದ್ರ ಸಹಕರಿಸಿದ್ದರು. ಮತನಾದ ಜಾಗೃತಿ ಕರಪತ್ರಗಳನ್ನು ಈ ಸಂದರ್ಭ ವಿತರಿಸಲಾಯಿತು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts