ಜಿಲ್ಲಾ ಸುದ್ದಿ

ದನಕಳ್ಳರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸತ್ಯಾಗ್ರಹಕ್ಕೆ ಸಂತರ, ಸಾರ್ವಜನಿಕರ ಸಾಥ್

www.bantwalnews.com – ಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು

 ಮುಡಿಪು ಸಮೀಪದ ಕೈರಂಗಳ ಪುಣ್ಯಕೋಟಿನಗರ ಅಮೃತಧಾರಾ ಗೋಶಾಲೆಯಿಂದ ಒಂದು ಗೋವನ್ನು ಕದ್ದೊಯ್ಯಲಾಗಿದೆ. ಗೋಶಾಲೆಯ ಸಿಬಂದಿ ಗಮನಿಸಿ, ಸೆಳೆದಿದ್ದರಿಂದ ಇನ್ನೊಂದು ಗೋವನ್ನು ಕದ್ದೊಯ್ಯಲಾಗಲಿಲ್ಲ. ಆದರೆ ಗೋಕಳ್ಳರು ಸಿಬಂದಿಗೆ ತಲವಾರು ಝಳಪಿಸಿ, ಇನ್ನೊಮ್ಮೆ ಬರುತ್ತೇವೆ ಎಂದು ಬೆದರಿಸಿ, ತೆರಳಿದ ರೀತಿ ಗೋಶಾಲೆ ಅಧ್ಯಕ್ಷ ಟಿ.ಜಿ.ರಾಜಾರಾಮ ಭಟ್ ಸತ್ಯಾಗ್ರಹಕ್ಕೆ ಕುಳಿತುಕೊಳ್ಳಲು ಕಾರಣವಾಯಿತು.

ಈ ಸತ್ಯಾಗ್ರಹ ಏಪ್ರಿಲ್ 1ರಂದು ಆರಂಭವಾಯಿತು. 8 ದಿನಗಳ ಈ ಅವಧಿಯಲ್ಲಿ ಹಿಂದು ಸಂಘಟನೆಗಳು, ಗೋ ಪ್ರೇಮಿಗಳು, ಸಂತರು ಆಗಮಿಸಿ ಬೆಂಬಲ ಕೋರಿದರು. ಶನಿವಾರ ರಾತ್ರಿ ರಾಜಾರಾಮ ಭಟ್ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಹೋರಾಟ ಯಾಕೆ ? :

ಒಂದು ಗೋವನ್ನು ಕದ್ದೊಯ್ದಿರುವುದಕ್ಕೇ ಉಪವಾಸ ಸತ್ಯಾಗ್ರಹ, ಹೋರಾಟ ಅವಶ್ಯವೇ ಎಂಬ ಮಾತು ಕೇಳಿಬಂದವು. ನಿರಶನ ಮಾಡುತ್ತಿರುವ ಗೋಶಾಲೆಯ ಅಧ್ಯಕ್ಷ ಟಿ.ಜಿ.ರಾಜಾರಾಮ ಭಟ್ ಅವರ ಪ್ರಕಾರ, ಒಂದು ಗೋವಿನ ಕಳ್ಳತನದ ಪ್ರಶ್ನೆಗಿಂತಲೂ ಕ್ರೌರ್ಯ ಮತ್ತು ಸವಾಲು ಹಾಕಿ ತೆರಳುವ ಮನೋಭಾವದ ವಿರುದ್ಧ ಹೋರಾಟವಿದು.

2008, 2010, 2014ರಲ್ಲಿ ಇದೇ ಗೋಶಾಲೆಯಿಂದ ಗೋವುಗಳನ್ನು ಕಳವು ಮಾಡಲಾಗಿದೆ. ಮತ್ತೆ ಮತ್ತೆ ಗೋಶಾಲೆ ಮತ್ತು ಕೃಷಿಕರ ಹಟ್ಟಿಯಿಂದ ಕದ್ದೊಯ್ಯುವ ಸಾಹಸ ಅಪಾಯಕಾರಿ. ಮುಂದಿನ ಪೀಳಿಗೆಗಾಗಿ ಮತ್ತು ಭಾರತೀಯ ಗೋತಳಿಗಳ ಉಳಿವಿಗಾಗಿ ಹೋರಾಟ ಅನಿವಾರ್ಯ, ಇದು ಸಂವಿಧಾನಬದ್ಧವಾದ ಮತ್ತು ನ್ಯಾಯೋಚಿತ ರೀತಿಯ ಹೋರಾಟ ಎನ್ನುತ್ತಾರೆ ಭಟ್.

ಸಾಕಿದ ನಾಯಿ, ಗಿಣಿಯನ್ನು ಕಳೆದುಕೊಂಡವರೇ ದುಃಖ ತಡೆದುಕೊಳ್ಳದೆ ಒದ್ದಾಡುತ್ತಾರೆ. ಇನ್ನು ದನವನ್ನು ಕಳೆದುಕೊಂಡರೆ?

ಭಾನುವಾರ ಏನಾಯಿತು?

ಭಾನುವಾರ ಸಂಜೆ ಅಮೃತಧಾರಾ ಗೋಶಾಲಾ ಆವರಣದಲ್ಲಿ ಗೋಭಕ್ತರ ಸಮಾವೇಶ ನೆರವೇರಿತು.ಸಮಾವೇಶದಲ್ಲಿ ನೆರೆದಿದ್ದ ಗೋಪ್ರೇಮಿಗಳೆಲ್ಲಾ ಪೋಲೀಸರು ಕಳ್ಳರನ್ನು ಬಂಧಿಸುವವರೆಗೆ ಹೋರಾಟ ಮುಂದುವರಿಸಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕೈರಂಗಳ ಗ್ರಾಪಂ ಸದಸ್ಯ ನಂದರಾಜ ಶೆಟ್ಟಿ ಉಪವಾಸ ಕೈಗೊಂಡಿದ್ದಾರೆ.

ಸೋಮವಾರ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಹಿಂದೂ   ಜಾಗರಣ ವೇದಿಕೆ ಹೂಹಾಕುವ ಕಲ್ಲು ಘಟಕದ 10 ಜನ ಸದಸ್ಯರು ಉಪವಾಸ ಕೈಗೊಳ್ಳಲಿದ್ದಾರೆ.

ಮಂಗಳವಾರದಂದು ಫಜೀರು ಬಂಟರ ಸಂಘದ 20 ಜನ ಸದಸ್ಯರು ಉಪವಾಸ  ಕೈಗೊಳ್ಳಲಿದ್ದಾರೆ. ಬುಧವಾರ ಫಜೀರು ˌತಂಜರೆ ˌಕಂಬಳ ಪದವಿನ ಹಿಂದೂ ಜಾಗರಣ ವೇದಿಕೆಯ 20 ಜನ ಸದಸ್ಯರು ಉಪವಾಸ ಕೈಗೊಳ್ಳಲಿದ್ದಾರೆ. ಸೋಮವಾರದಿಂದ ಪ್ರತಿದಿನ ಸಂಜೆ ಘಂಟೆ 5 ರಿಂದ 7 ರವರೆಗೆ ಸಾಮೂಹಿಕ ಭಜನೆ ನಡೆಯಲಿದೆ. ಭಾನುವಾರ ಸಂಜೆ ಪುಂಡರೀಕಾಕ್ಷ ಇವರಿಂದ ಪುಣ್ಯಕೋಟಿ ಮಹಾತ್ಮೆ ಹರಿಕಥಾ ಕಾಲಕ್ಷೇಪ ನಡೆಯಿತು. ಸರಪಾಡಿ ಅಶೋಕ ಶೆಟ್ಟರು ಗೋವಿನ ಬಗ್ಗೆ ಮಾತನಾಡಿದರು. ಮಂಗಳವಾರ ಗುರುಪುರದ ವಜ್ರದೇಹಿ ಶ್ರೀಗಳು ಅಮೃತಧಾರಾ ಗೋಶಾಲೆಯ ಆವರಣದಲ್ಲಿ ಉಪವಾಸ ಕೈಗೊಳ್ಳಲಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.