www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯ ವತಿಯಿಂದ ಮಕ್ಕಳಿಗೆ ರಸ್ತೆ ಸುರಕ್ಷತೆಯ ನಿಯಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಗುರುವಾರ ಕೈಗೊಳ್ಳಲಾಗಿದ್ದು, ಅದರ ಭಾಗವಾಗಿ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್ನ ಮಕ್ಕಳೇ ಒಂದು ಹೊತ್ತಿನ ಮಟ್ಟಿಗೆ ಸಂಚಾರಿ ಪೊಲೀಸರಾದರು. ನಿಯಮ ತಪ್ಪಿ ಚಲಿಸುವ ವಾಹನಗಳಿಗೆ ಕೇಸ್ ಹಾಕಿದರು!
ಬೆಳಗ್ಗೆ ೧೦ಕ್ಕೆ ಮೇಲ್ಕಾರ್ನಲ್ಲಿರುವ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಗೆ ತಮ್ಮ ಶಾಲೆಯ ಯೂನಿಫಾರ್ಮ್ನಲ್ಲಿ ಆಗಮಿಸಿದ ಹೈಸ್ಕೂಲು ಮಕ್ಕಳಿಗೆ ಠಾಣಾ ಉಪನಿರೀಕ್ಷಕರಾದ ಯಲ್ಲಪ್ಪ ಮತ್ತು ವಿಠಲ ಶೆಟ್ಟಿ ಟ್ರಾಫಿಕ್ ನಿಯಮಗಳ ಕುರಿತ ಕ್ಲಾಸ್ ತೆಗೆದುಕೊಂಡರು. ಥಿಯರಿಯಷ್ಟೇ ಸಾಕೇ, ಪ್ರಾಕ್ಟಿಕಲ್ ಬೇಕಲ್ವೇ, ಹೀಗಾಗಿ ಮಕ್ಕಳನ್ನು ಐದು ತಂಡಗಳನ್ನಾಗಿ ಬೇರ್ಪಡಿಸಲಾಯಿತು. ಬಂಟ್ವಾಳದ ಅತ್ಯಂತ ವಾಹನನಿಬಿಡ ಜಂಕ್ಷನ್ಗಳಾದ ಮೇಲ್ಕಾರ್, ಪಾಣೆಮಂಗಳೂರು, ತುಂಬ್ಯ(ಬಂಟ್ವಾಳ ಬೈಪಾಸ್), ಬಿ.ಸಿ.ರೋಡ್ ಮತ್ತು ಕೈಕಂಬ (ಪೊಳಲಿ ಕ್ರಾಸ್)ಗಳಲ್ಲಿ ಮಕ್ಕಳ ತಂಡಗಳು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ಬಂದು ನಿಂತರು. ಅಲ್ಲಿಂದಲೇ ಪಾಠ ಮಾಡಿದ್ದನ್ನು ಮಕ್ಕಳು ಅನುಷ್ಠಾನಗೊಳಿಸಲು ಆರಂಭಿಸಿದರು. ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಸಿಗ್ನಲ್ ಕೊಡುವುದು ಹೇಗೆ ಎಂಬುದನ್ನು ಮಾಡಿ ತೋರಿಸಿದರು. ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಮಕ್ಕಳ ಕಣ್ಣುತಪ್ಪಿಸಿ ಹೋಗಲು ಸಾಧ್ಯವೇ ಆಗಲಿಲ್ಲ. ಐದೂ ಕಡೆಗಳಲ್ಲಿ ಎರಡು ಗಂಟೆಗಳ ಅವಯಲ್ಲಿ ಏಕಕಾಲಕ್ಕೆ ಸುಮಾರು ೫೦ರಷ್ಟು ಕೇಸ್ಗಳನ್ನು ಮಕ್ಕಳೇ ಹಾಕಿದರು. ವಾಹನಗಳಲ್ಲಿ ಯಾವ್ಯಾವ ಡಾಕ್ಯುಮೆಂಟುಗಳು ಇರಬೇಕು, ಹೊಗೆ ತಪಾಸಣೆ ಆಗಿದೆಯಾ, ಹೆಲ್ಮೆಟ್ ಹಾಕಿದ್ದಾರಾ, ಯಾವ ನಿಯಮ ಉಲ್ಲಂಘನೆಗೆ ಏನು ಫೈನ್ ಹೀಗೆ ಪ್ರತಿಯೊಂದನ್ನೂ ಕೂಲಂಕಷವಾಗಿ ಪರಿಶೀಲಿಸಿದ ಮಕ್ಕಳು ಟ್ರಾಫಿಕ್ ಪೊಲೀಸರ ಸಹಾಯದದಿಂದ ಫೈನ್ ಹಾಕಿದರು. ಶಿಕ್ಷಕಿಯರಾದ ಕೇಶವತಿ, ರಮ್ಯಾ, ಅನಿತಾ ಮಕ್ಕಳ ಜೊತೆಗಿದ್ದರು.